ಸಾರಾಂಶ
ಮುಂಡರಗಿ: ಕನ್ನಡನಾಡು ಏಕೀಕರಣಗೊಂಡ ನಂತರ ಭಾವನಾತ್ಮಕವಾಗಿ ಕರ್ನಾಟಕ ಎನ್ನುವ ಹೆಸರಿನಿಂದ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರಿಡುವ ದಿಟ್ಟನಿರ್ಧಾರ ಕೈಗೊಂಡವರು ಡಿ.ದೇವರಾಜ ಅರಸು ಎಂದು ಧಾರವಾಡ ಕೆಎಂಎಫ್ ನಿರ್ದೇಶಕ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ, ತಾಪಂ ಮುಂಡರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂಡರಗಿ ಮತ್ತು ವಿವಿಧ ಸಮುದಾಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.1915ರ ಆ. 20 ರಂದು ಮೈಸೂರು ಜಿಲ್ಲೆಯಲ್ಲಿ ಜನಿಸಿದ ಅರಸು ತಮ್ಮ ಜೀವಿತಾ ಅವಧಿಯಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿ ಅತ್ಯುನ್ನತ ಕಾರ್ಯ ಮಾಡಿದರು. ಕರ್ನಾಟಕದ ರಾಜಕಾರಣದಲ್ಲಿ ಸುಧಾರಣೆ ಹಾಗೂ ಮಹಾನ್ ಚಿಂತಕರಾಗಿ ಬಡವರ, ಹಿಂದುಳಿದವರ ಪರವಾಗಿದ್ದ ಮುಖ್ಯಮಂತ್ರಿಯಾಗಿ ಅತ್ಯಂತ ಮಹತ್ತರ ಕಾರ್ಯ ಮಾಡಿದವರು. ರಾಜಕಾರಣದಲ್ಲಿ ನವಯುಗ ಪ್ರಾರಂಭವಾಗಿದ್ದೇ ಇವರಿಂದ. ಹೀಗಾಗಿ ಇವರನ್ನು ಕರ್ನಾಟಕ ರಾಜ್ಯದ ನವಯುಗದ ಹರಿಕಾರ ಎಂದು ಕರೆಯಲಾಗುತ್ತಿದೆ. ಉಳುವವನೇ ಭೂ ಒಡೆಯ ಎನ್ನುವ ಕಾನೂನು ಜಾರಿಗೆ ತಂದ ಕೀರ್ತಿ, ಜೀತ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದ ಕೀರ್ತಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿದವರು ಡಿ.ದೇವರಾಜ ಅರಸು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವಸತಿ ನಿಲಯ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.ಕೆ.ಆರ್. ಬೆಲ್ಲದ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಎಚ್.ಜಂಗನವಾರಿ ಮಾತನಾಡಿ, ಡಿ.ದೇವರಾಜ ಅರಸು ದಲಿತರು, ದಮನಿತರು, ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬಂದು ಶಿಕ್ಷಣ, ಉದ್ಯೋಗ ಪಡೆದುಕೊಳ್ಳಲು ಕಾರಣೀಕರ್ತರಾದವರು. ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದಿದ್ದ ಇವರು, ಮಲಹೊರುವ ಪದ್ಧತಿಯನ್ನು ಸರ್ಕಾರದ ಮಟ್ಟದಲ್ಲಿ ನಿಷೇಧ ಮಾಡಿದರು. ಭಾಗ್ಯಜ್ಯೊತಿ ಯೋಜನೆಯ ಮೂಲಕ ಬಡವರ, ಮನೆಗಳಿಗೆ ವಿದ್ಯುತ್ ದೀಪ ಹಚ್ಚಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಪುರಸಭೆ ಸದಸ್ಯರಾದ ಪ್ರಹ್ಲಾದ ಹೊಸಮನಿ, ರಾಜಾಭಕ್ಷಿ ಬೆಟಗೇರಿ, ಜ್ಯೋತಿ ಹಾನಗಲ್, ತಾಪಂ ಇಒ ವಿಶ್ವನಾಥ ಹೊಸಮನಿ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವಪ್ಪ ಚಿಕ್ಕಣ್ಣವರ, ರೆಹಮಾನಸಾಬ್ ಮಲ್ಲನಕೇರಿ, ತಾಲೂಕು ಬಿಸಿಎಂ ಅಧಿಕಾರಿ ಶಿವಯೋಗಿ ಕಲ್ಮಠ, ಗಂಗಾಧರ ಅಣ್ಣೀಗೇರಿ, ಅರುಣಾ ಸೋರಗಾವಿ, ಸವಿತಾ ಸಾಸ್ವಿಹಳ್ಳಿ, ಸುವರ್ಣ ಕೋಟಿ, ಸುಜಾತಾ, ವಿ.ಎಸ್.ಘಟ್ಟಿ, ಬಸವರಾಜ ನವಲಗುಂದ, ವಿಠಲ್ ಗಣಾಚಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಯೋಗಿ ಕಲ್ಮಠ ಸ್ವಾಗತಿಸಿ, ವಿಠಲ್ ರಡ್ಡಿ ನಾವಳ್ಳಿ ನಿರೂಪಿಸಿದರು.