ಸಾರಾಂಶ
ಕನ್ನಡ ಪ್ರಭ ವಾರ್ತೆ ಕುಣಿಗಲ್
ಗೊರೂರು ಅಣೆಕಟ್ಟು ನಿರ್ಮಾಣ ಮಾಡಿ ಹತ್ತಾರು ಜಿಲ್ಲೆಗಳಿಗೆ ನೀರೊದಗಿಸುವ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಸರ್ಕಾರದ ಮುಂದೆ ಖಾಸಗಿ ಮಂಡನೆ ಮಾಡಿದ್ದು ದೇವೇಗೌಡರು. ಅವರ ಶ್ರಮದಿಂದ ಹೇಮಾವತಿ ಯೋಜನೆ ಫಲಪ್ರದವಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ತಿಳಿಸಿದ್ದಾರೆ .ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಿಜವಾಗಲೂ ರೈತರ ಬಡವರ ಕಾಳಜಿ ಹೊಂದಿರುವ ಧೀಮಂತ ನಾಯಕ ದೇವೇಗೌಡರ ಬಗ್ಗೆ ಸಂಸದ ಡಿ ಕೆ ಸುರೇಶ್ ಕೆಲವು ಸಂದರ್ಭದಲ್ಲಿ ಲಘುವಾಗಿ ಮಾತನಾಡಿರುವುದು ಖಂಡನೀಯ. ದೇವೇಗೌಡರಿಗೆ ನೀರಾವರಿ ಕುರಿತು ಇರುವ ಕಾಳಜಿ ಬಗ್ಗೆ ಇಲ್ಲಿಯವರೆಗೂ ಯಾರು ಕೂಡ ಚಕಾರವೆತ್ತುವುದಿಲ್ಲ. ಕಾವೇರಿ, ಭದ್ರಾ, ಹೇಮಾವತಿ, ಕೃಷ್ಣ ಕೊಳ್ಳದ ಯೋಜನೆಗಳಿರಬಹುದು ಅಥವಾ ಇನ್ನಾವುದೇ ನೀರಾವರಿ ಯೋಜನೆಗಳ ಕುರಿತು ಯಾವುತ್ತೂ ಸಹ ರಾಜೀಯಾಗಿಲ್ಲ. ಹಿರಿಯ ಮುತ್ಸದ್ದಿ ರಾಜಕಾರಣಿಗೆ ಪಂಜಾಬ್ ರಾಜ್ಯದಲ್ಲಿ ಅವರ ಹೆಸರಿನ ತಳಿ ಇದ್ದು ಆ ರಾಜ್ಯದ ಜನರು ಅವರಿಗೆ ನೀಡಿರುವ ಗೌರವವಾಗಿದೆ. ಅವರ ಬಗ್ಗೆ ಮಾತನಾಡವಾಗ ಅವರ ಸಾಧನೆ ನೆನಪಿಸಿಕೊಳ್ಳಬೇಕು. ಕೇವಲ ರಾಜಕಾರಣಕ್ಕೆ ಮಾತ್ರವೇ ಸೀಮಿತ ಮಾಡಬಾರದು ಎಂದರು.
ಗೊರೂರು ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಪ್ರಾರಂಭಗೊಂಡ ದೇವೇಗೌಡರ ನೀರಾವರಿಯ ಪರಿಶ್ರಮ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಯುವ ತನಕ ನಿರಂತರವಾಗಿ ನಡೆದಿತ್ತು , ಸಾಂದರ್ಭೀಕವಾಗಿ ವೈ ಕೆ ರಾಮಯ್ಯ ಪ್ರತಿಭಟನೆ ನಡೆಸಿದ್ದರೇ ಹೊರತು ದೇವೇಗೌಡರನ್ನು ವಿರೋಧಿಸಿಲ್ಲ. ಕುಣಿಗಲ್ ಬೈಪಾಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವ ಶ್ರೀರಂಗ ಏತ ನೀರಾವರಿಯಿಂದ ಉಂಟಾಗುವ ಸಾವಿರಾರು ಕೋಟಿ ಯೋಜನೆಯ ಕಮೀಷನ್ ಗಾಗಿ ಕಾಂಗ್ರೆಸ್ಸಿಗರು ಶ್ರಮಿಸುತ್ತಿದ್ದಾರೆ. ಈಗಾಗಲೇ ಮಾಗಡಿ ತಾಲೂಕಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ತರುತ್ತೇವೆಂಬ ಹೊಸ ಹಸಿಸುಳ್ಳು ಭಾಷಣವನ್ನು ಆರಂಭಿಸಿದ್ದು, ಅದರಲ್ಲಿ ಇನ್ನಷ್ಟು ಕಮೀಷನ್ ಪಡೆಯುತ್ತಾರೆ ಸಾರ್ವಜನಿಕರ ಬೆವರಿನ ಹಣವನ್ನು ಇಂತಹ ಅಸಂಬದ್ದ ಯೋಜನೆಗಳ ಮುಖಾಂತರ ಹಾಳು ಮಾಡುವುದನ್ನು ನಿಲ್ಲಿಸಬೇಕೆಂದರು .ಕುಣಿಗಲ್ ಗೆ ಪೈಪ್ ಲೈನ್ ಮುಖಾಂತರ ನೀರು ತರುವ ವಿಚಾರದಲ್ಲಿ ಡಿ 26 ನಾಲೆಯನ್ನು ಬೈಪಾಸ್ ಮಾಡಿದ್ದು ಎಡೆಯೂರು ಹೋಬಳಿಗೆ ನೀರಿನ ಲಭ್ಯತೆ ಆಗುವುದಿಲ್ಲ. ಈ ವಿಚಾರವಾಗಿ ನಾವು ಒತ್ತಡ ತಂದರೆ ತುರುವೇಕೆರೆ , ಗುಬ್ಬಿ ತಾಲೂಕಿಗೆ ಹೆಚ್ಚು ಅನುಕೂಲ ಆಗುತ್ತದೆಂದು ಹೇಳುವ ಶಾಸಕರಿಗೆ ದಾಖಲೆಯೊಂದನ್ನು ಪ್ರದರ್ಶಿಸಿ ಕುಣಿಗಲ್ ಭಾಗದ 4552 ಎಕ್ಟೇರ್ ಪ್ರದೇಶಕ್ಕೆ ನೀರಿನ ಲಭ್ಯತೆ ತೊಂದರೆಯಾಗುತ್ತದೆಂದರು. ರಾಜಕಾರಣ ಮಾಡುವ ವಿಚಾರಕ್ಕೆ ನೀರಿನ ಬಳಕೆಯನ್ನು ಬಿಟ್ಟು ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಕುಣಿಗಲ್ ತಾಲೂಕಿನ ಬಹುತೇಕ ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕೆಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಅಧ್ಯಕ್ಷ ಕೆ ಎಲ್ ಹರೀಶ್ , ಪ್ರಕಾಶ್ ದೀಪು ಸೇರಿದಂತೆ ಇತರರು ಇದ್ದರು