ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಜೆಡಿಎಸ್‌ಗೆ ಸಿಕ್ಕಿರುವ ಮೂರು ಕ್ಷೇತ್ರಗಳಲ್ಲೂ ಕುಟುಂಬದವರೇ ಸ್ಪರ್ಧಿಸಿದ್ದಾರೆ. ಪಕ್ಷದ ಬೇರೆ ನಾಯಕರು ಬೆಳೆಯುವುದು ದೇವೇಗೌಡರ ಕುಟುಂಬದವರಿಗೆ ಇಷ್ಟವಿಲ್ಲ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಟೀಕಿಸಿದರು.ತಾಲೂಕಿನ ಗೋರವನಹಳ್ಳಿ ಗ್ರಾಮದಲ್ಲಿ ಶಾಸಕ ಕದಲೂರು ಉದಯ್ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ ಮೂವರೂ ಗೌಡರ ಕುಟುಂಬದವರೇ. ಇನ್ನು ಚುನಾವಣೆಗೆ ಸ್ಪರ್ಧಿಸಲು ಪಕ್ಷದೊಳಗೆ ಬೇರೆ ನಾಯಕರು ಯಾರೂ ಇಲ್ಲವೇ ಅಥವಾ ಇವರೆದುರು ಯಾರಾದರೂ ಬೆಳೆದುಬಿಡುವರೆಂಬ ಭಯವೇ ಎಂದು ಪ್ರಶ್ನಿಸಿದರು. ಹೋದ ಕಡೆಯಲ್ಲೆಲ್ಲ ನನ್ನ ಕರ್ಮ ಭೂಮಿ ಎನ್ನುತ್ತಾರೆ, ಸಾತನೂರು, ರಾಮನಗರ, ಮಧುಗಿರಿ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮುಗಿಸಿ ಈಗ ಮಂಡ್ಯಕ್ಕೆ ಬಂದಿದ್ದಾರೆ. ಚುನಾವಣೆ ನಂತರ ಮತ್ತೆಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆ ಕೊಡುತ್ತಾರೆ. ಇವರು ಜಿಲ್ಲೆಗೆ ಕೊಟ್ಟಿರುವ ಶಾಶ್ವತ ಕೊಡುಗೆ ಏನು. ಕೇವಲ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಬೇಕಾದಾಗ ಬರುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗಲೇ ಅಭಿವೃದ್ಧಿ ಮಾಡದಿರುವವರು ಸಂಸದರಾಗಿ ಏನು ಮಾಡುತ್ತಾರೆ. ಅವರನ್ನು ಗೆಲ್ಲಿಸುವುದರಿಂದ ಜಿಲ್ಲೆಗೆ ಯಾವ ಪ್ರಯೋಜನವೂ ಇಲ್ಲ ಎಂದರು.
ಏ.23, 24, 25 ರಂದು ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮತದಾನಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮತದಾನಕ್ಕಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಸೌಲಭ್ಯ ಕೇಂದ್ರವನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ. ಏ.23, 24,25 ರಂದು 3 ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 35ರಲ್ಲಿ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮತದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.