ಸಾರಾಂಶ
ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ಟಿ. ಸತೀಶ್ ಜವರೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ಟಿ. ಸತೀಶ್ ಜವರೇಗೌಡ ಹೇಳಿದರು.ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತಮ ಅಂಕಗಳ ಗಳಿಸುವುದಕ್ಕಿಂತ ಉತ್ತಮ ವ್ಯಕ್ತಿತ್ವ ಮತ್ತು ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳುವುದು ತುಂಬಾ ಅಗತ್ಯವಿದೆ. ಅದಕ್ಕಾಗಿ ಉತ್ತಮ ಸ್ನೇಹಿತರ ಒಡನಾಟದಲ್ಲಿರಬೇಕು. ಜೊತೆಗೆ ಒಳಿತಿನ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿ ಇರಬೇಕು. ಈ ಗುರಿಯನ್ನು ತಲುಪಲು ಉತ್ತಮ ದಾರಿಯಲ್ಲಿ ಸಾಗಬೇಕು. ಆ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
42 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಉತ್ತಮ ವಿದ್ಯಾರ್ಥಿ, ಶಾಲಾ ಉತ್ತಮ ಹಾಜರಾತಿ ವಿದ್ಯಾರ್ಥಿ ಹಾಗೂ ಶಾಲಾ ಉತ್ತಮ ಪುಸ್ತಕ ನಿರ್ವಹಣಾವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ವಿಜ್ಞಾನ ಮೇಳ ಮತ್ತು ಮಕ್ಕಳ ಸಂತೆಯಲ್ಲಿ ಉತ್ತಮ ಕೌಶಲ ಮೆರೆದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಸಂಗೀತ ಶಿಕ್ಷಕಿ ಶ್ರೀದೇವಿ, ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್, ಹಿರಿಯ ಶಿಕ್ಷಕರಾದ ಮಹಮ್ಮದ್ ಸುಹೇಲ್, ಪಿ.ಎಲ್. ಭಾಗ್ಯ, ಎನ್. ಸುಜಾತ, ಕಲ್ಪನಾ, ಸತ್ಯವತಿ, ಜಿಪಿಟಿ ಶಿಕ್ಷಕರಾದ ಸುನಿಲ್ ಕುಮಾರ್, ರಂಗಸ್ವಾಮಿ ಇದ್ದರು.