ಡೀಮ್ಡ್ ಅರಣ್ಯ ಅಭಿವೃದ್ಧಿ, ರಕ್ಷಣಾ ಯೋಜನೆ ರೂಪಿಸಿ

| Published : Jan 05 2024, 01:45 AM IST

ಡೀಮ್ಡ್ ಅರಣ್ಯ ಅಭಿವೃದ್ಧಿ, ರಕ್ಷಣಾ ಯೋಜನೆ ರೂಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಘಟ್ಟದಲ್ಲಿ ಡೀಮ್ಡ್ ಕಂದಾಯ ಅರಣ್ಯಗಳ ಕಬಳಿಕೆ, ನಾಶ ಆಗುತ್ತಲೇ ಇದ್ದು, ರಾಜ್ಯ ಸರ್ಕಾರ ಕೂಡಲೇ ಡೀಮ್ಡ್ ಅರಣ್ಯ ಅಭಿವೃದ್ಧಿ ರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.‌

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಒತ್ತಾಯಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಶ್ಚಿಮ ಘಟ್ಟದಲ್ಲಿ ಡೀಮ್ಡ್ ಕಂದಾಯ ಅರಣ್ಯಗಳ ಕಬಳಿಕೆ, ನಾಶ ಆಗುತ್ತಲೇ ಇದ್ದು, ರಾಜ್ಯ ಸರ್ಕಾರ ಕೂಡಲೇ ಡೀಮ್ಡ್ ಅರಣ್ಯ ಅಭಿವೃದ್ಧಿ ರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಒತ್ತಾಯಿಸಿದರು.‌

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2022ರಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಗೆ ಸಲ್ಲಿಸಿದ ಅಫಿಡವೀಟ್‌ನಲ್ಲಿ ಕೇವಲ 3.3 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಇದೆ ಎಂದು ಘೋಷಿಸಿದೆ. ಡೀಮ್ಡ್ ಅರಣ್ಯ ರಕ್ಷಣೆ, ಅಭಿವೃದ್ಧಿಗೆ ಅರಣ್ಯ ಇಲಾಖೆ ಕ್ರಿಯಾಯೋಜನೆ ರೂಪಿಸಲಿದೆ ಎಂದು ಅಫಿಡವಿಟ್‌ ನಲ್ಲಿ ಅಧಿಕೃತವಾಗಿ ಸರ್ಕಾರ ಪ್ರಕಟಪಡಿಸಿದೆ. ಆದರೆ, ಈವರೆಗೆ ಅಂತ ಯಾವ ಯೋಜನೆ ರೂಪಿಸಿಲ್ಲ ಎಂದು ದೂರಿದರು.‌ಸೊರಬದ ಉದ್ರಿಯ ಮಲೆನಾಡು ಕೆರೆ ಸಮಾವೇಶಲ್ಲಿ ಮಲೆನಾಡಿನ 4000 ಕೆರೆಗಳ ಅತಿಕ್ರಮಣ ತೆರವು ಮಾಡಲು ಕಾಲಮಿತಿಯ ಕಾರ್ಯಾಚರಣೆಗೆ ಜಿಲ್ಲಾಡಳಿಗಳು ಮುಂದಾಗಬೇಕು. ಸಾಗರ ತಾಲೂಕು ತಾಳಗುಪ್ಪ ಹೋಬಳಿಯ 5 ಗ್ರಾಮಗಳಲ್ಲಿ 2000 ಎಕರೆ ಪ್ರದೇಶ ಕಾನು ಅರಣ್ಯಗಳು ಹೊಂದಿದೆ. ಕೆಲ ಹಿತಾಸಕ್ತಿಗಳು ಕಾನು ಅರಣ್ಯ ಭೂಮಿ ಕಬಳಿಸುವ ಕೃತ್ಯಗಳಲ್ಲಿ ತೊಡಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಪೂರ್ಣ ತಡೆಹಾಕಬೇಕು ಎಂದು ಒತ್ತಾಯಿಸಿದರು. ಮಲೆನಾಡು ಬರದ ನಾಡಾಗುತ್ತಿದೆ. ಭೂಕುಸಿತ ಹೆಚ್ಚುತ್ತಿದೆ. ಘಟ್ಟದ ನದಿಗಳು ಸಾಯುತ್ತಿವೆ. ನಾಡಿಗೆ ನೀರುಣಿಸುವ ಹೊಳೆ-ಹಳ್ಳ, ಕೆರೆಗಳನ್ನು ಉಳಿಸಲು ಇಲ್ಲಿನ ನದೀ ಕಣಿವೆಗಳ ಕಂದಾಯ ಅರಣ್ಯಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಜಾರಿಗೆ ತರಬೇಕು. ಕಂದಾಯ, ಅರಣ್ಯ ಕಾಯಿದೆಗಳ ಕಟ್ಟುನಿಟ್ಟಿನ ಪಾಲನೆ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರ, ವನವಾಸಿಗಳ ಸಹಭಾಗಿತ್ವದ ಸಮಗ್ರ ಅರಣ್ಯ ನೀತಿ ರೂಪಿಸಬೇಕು ಎಂದರು.ಮಲೆನಾಡಿನ ಮಂಗನ ಕಾಯಿಲೆಗೆ ಕ್ರಮ ಕೈಗೊಳ್ಳಬೇಕು. ಅತಿಯಾದ ಕೀಟನಾಶಕ ಬಳಕೆ ತಡೆಗಟ್ಟಬೇಕು. ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಜಲಮಾಲಿನ್ಯ ತಡೆಯಬೇಕು. ಉಚ್ಚ ನ್ಯಾಯಾಲಯದಲ್ಲಿ ಇರುವ ಅರಣ್ಯ ಮೊಕದ್ದಮೆಗಳಲ್ಲಿ ಸರಿಯಾದ ವಾದ ಮಂಡಿಸದೇ ಘಟ್ಟದ ಅರಣ್ಯಗಳು ಖಾಸಗಿಯವರ ಪಾಲಾಗುತ್ತಿದೆ. ಅರಣ್ಯ ಇಲಾಖೆ ಬಲವಾದ ವಾದ ಮಂಡಿಸಿ ಅರಣ್ಯ ಭೂಮಿ ರಕ್ಷಿಸಬೇಕು. ಭೀಮಸೇತು, ಹಗಲತ್ತಿ, ಕಟ್ಟೆಕೊಪ್ಪ ಇನ್ನಿತರ ಒಟ್ಟು 10 ನ್ಯಾಯಾಲಯ ಪ್ರಕರಣಗಳಲ್ಲಿ 10,000 ಎಕರೆ ಅರಣ್ಯ ಭೂಮಿಯ ಅಳಿವು ಉಳಿವಿನ ಪ್ರಶ್ನೆ ಇದೆ ಎಂದು ತಿಳಿಸಿದರು. ವೃಕ್ಷಲಕ್ಷ ಆಂದೋಲನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ, ಜೀವವೈವಿಧ್ಯ ಸಂರಕ್ಷಣೆ ಸಂವರ್ಧನೆಗೆ 1983 ರಿಂದ ಜನಾಂದೋಲನ ನಡೆಸುತ್ತಿದೆ. 2023ರ ಇಡೀ ವರ್ಷ ಗ್ರಾಮ ನೈಸರ್ಗಿಕ ಭೂಮಿ ಸಂರಕ್ಷಣೆಗಾಗಿ ತಳಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿದೆ. ಅರಣ್ಯ ವರ್ಕಿಂಗ್ ಪ್ಲಾನ್‌ನಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಡ ಹಾಕಲಾಗಿದೆ. ಜೀವವೈವಿಧ್ಯ ಸಮಿತಿ ಬಲಪಡಿಸಲು ರಚನಾತ್ಮಕ ಅಭಿಯಾನ ನಡೆಸಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ ಇದ್ದರು.