ಸಾರಾಂಶ
ಕ್ರೀಡಾ ಅಭಿರುಚಿ ಮೈಗೂಡಿಸಿಕೊಂಡಲ್ಲಿ ಆರೋಗ್ಯಯುತ ಜೀವನ ಪಡೆಯಲು ಸಾಧ್ಯ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಗದಗ: ಕ್ರೀಡಾ ಅಭಿರುಚಿ ಮೈಗೂಡಿಸಿಕೊಂಡಲ್ಲಿ ಆರೋಗ್ಯಯುತ ಜೀವನ ಪಡೆಯಲು ಸಾಧ್ಯ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಅಭಿರುಚಿ, ಆರೋಗ್ಯ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪ್ರತಿಯೊಬ್ಬ ನೌಕರರು ಪಡೆದುಕೊಳ್ಳಬೇಕು ಆ ಮೂಲಕ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕ್ರೀಡಾ ಅಭ್ಯಾಸದ ಮೂಲಕ ನೌಕರರು ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಬಹುದಾಗಿದೆ. ಟೆನ್ನಿಸ್ ಕೋರ್ಟ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅದು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. 2025ರಲ್ಲಿ ಜಿಲ್ಲೆಯ ಕ್ರೀಡಾ ಸೌಲಭ್ಯಗಳ ಬೌದ್ಧಿಕ ವಿಕಸನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ, ಬಿಲ್ಲುಗಾರಿಕೆ ಸೇರಿದಂತೆ ಇತರ ಕ್ರೀಡಾ ಸೌಲಭ್ಯಗಳಿಗೂ ಪ್ರೋತ್ಸಾಹ ನೀಡಲಾಗುವುದು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳು ನಮ್ಮ ದೇಶದಲ್ಲಿ ಇಲ್ಲ, ಆದರೆ ಇದೆಲ್ಲದರ ನಡುವೆಯೂ ನಾವು ಸಾಧನೆ ಮಾಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸರ್ಕಾರಿ ನೌಕರರು ದಿನನಿತ್ಯದ ಕೆಲಸದ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರೀಡಾ ಚಟುವಟಿಕೆಗಳು ಅವಶ್ಯಕ. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವಾಕ್, ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಬೇಕು. ಇದರಿಂದ ಒತ್ತಡ ನಿವಾರಣೆ ಹಾಗೂ ಕೆಲಸದ ಕಾರ್ಯಕ್ಷಮತೆ ಹೆಚ್ಚಲು ಸಹಾಯವಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ಡಾ. ರವಿ ಗುಂಜೀಕರ ಮಾತನಾಡಿ, ಹಿಂದಿನ ಕ್ರೀಡಾಕೂಟದಲ್ಲಿ ನಮ್ಮ ಜಿಲ್ಲೆಯ ನೌಕರರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೆಸರು ತಂದಿದ್ದಾರೆ. ಈ ವರ್ಷವೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರುವಂತೆ ಪ್ರೇರೇಪಿಸೋಣ ಎಂದರು. ಕಾರ್ಯಕ್ರಮದಲ್ಲಿ ಬಿ.ಬಿ. ಅಸೂಟಿ, ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ರಾಜ್ಯ ಪರಿಷತ್ ಸದಸ್ಯ ಡಿ.ಟಿ. ವಾಲ್ಮೀಕಿ, ಜಿಲ್ಲಾ ಖಜಾಂಜಿ ಎಂ.ಎಂ. ನಿಟ್ಟಾಲಿ, ಜಿಲ್ಲಾ ಕಾರ್ಯದರ್ಶಿ ಡಾ. ಬಸವರಾಜ ಬಳ್ಳಾರಿ, ಗೌರವಾಧ್ಯಕ್ಷ ಡಿ.ಎಸ್. ತಳವಾರ, ಕಾರ್ಯಾಧ್ಯಕ್ಷ ಸಿದ್ದಪ್ಪ ಲಿಂಗಧಾಳ, ಹಿರಿಯ ಉಪಾಧ್ಯಕ್ಷ ಮಾರುತಿ ಮಂಗಳಾಪೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಳೆದ ವರ್ಷ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸನ್ಮಾನಿಸಿ, ಸಾಧನೆಯನ್ನು ಶ್ಲಾಘಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿದರು.