ಗದಗ ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಕನ್ನಡ ವಿಭಾಗ ಮತ್ತು ರೀಡಿಂಗ್ ರೂಮ್ ವಿಭಾಗದ ಸಹಯೋಗದಲ್ಲಿ ನಾನು ನನ್ನ ಪುಸ್ತಕ ಶೀರ್ಷಿಕೆ ಅಡಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಗದಗ: ಪುಸ್ತಕ ಓದುವುದು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಅಭ್ಯಾಸವಾಗಿದೆ. ಪುಸ್ತಕಗಳು ಜ್ಞಾನ ಭಂಡಾರವಾಗಿದ್ದು, ಅವು ವಿದ್ಯಾರ್ಥಿಗಳ ಚಿಂತನೆ, ಭಾಷಾ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನುಅಭಿವೃದ್ಧಿಪಡಿಸುತ್ತವೆ ಎಂದು ಚೇರ್ಮನ್ ಆನಂದ್ ಪೋತ್ನಿಸ್ ತಿಳಿಸಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಕನ್ನಡ ವಿಭಾಗ ಮತ್ತು ರೀಡಿಂಗ್ ರೂಮ್ ವಿಭಾಗದ ಸಹಯೋಗದಲ್ಲಿ ನಾನು ನನ್ನ ಪುಸ್ತಕ ಶೀರ್ಷಿಕೆ ಅಡಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಕಾರಣ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ರೂಢಿಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ್ ಮಾತನಾಡಿ, ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡುವುದು ಮತ್ತು ಓದಿದ ವಿಷಯವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಬಹಳಷ್ಟು ಉಪಯುಕ್ತವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕಗಳನ್ನು ತಮ್ಮ ಉತ್ತಮ ಸ್ನೇಹಿತರನ್ನಾಗಿ ಮಾಡಿಕೊಂಡು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.ನಾನು ನನ್ನ ಪುಸ್ತಕ ಈ ಒಂದು ಕಾರ್ಯಕ್ರಮದಲ್ಲಿ ಭಗವದ್ಗೀತೆ ಪುಸ್ತಕದ ಬಗ್ಗೆ ಅಕ್ಷಯ್ ಕುಮಾರ್ ಗುಡಿ, ಹೇಳಿ ಹೋಗು ಕಾರಣ ಪುಸ್ತಕದ ಬಗ್ಗೆ ಭರತ ಸ್ವಾಮಿ, ಭಗವದ್ಗೀತೆ ಗ್ರಂಥದ ಬಗ್ಗೆ ಸಾಧಿಯ ಪರ್ವೀನ್ ಹೊನ್ನಳ್ಳಿ, ಮೈಂಡ್ ಮ್ಯಾಜಿಕ್ ಪುಸ್ತಕದ ಬಗ್ಗೆ ನಂದಿತಾ ಹಂಪಿ ಹೊಳಿ, ಶಿವರಾಮ ಕಾರಂತರ ಮರಳಿ ಮಣ್ಣಿಗೆ ಪುಸ್ತಕದ ಬಗ್ಗೆ ರಾಜೇಶ್ವರಿ ಪಾಟೀಲ, ಅತ್ಯಮೂಲ್ಯ ನುಡಿಮುತ್ತುಗಳು ಗ್ರಂಥದ ಬಗ್ಗೆ ಸೌಜನ್ಯ ಮರಿಗೌಡರ ಹಾಗೆ ಪುಸ್ತಕಗಳ ಮಹತ್ವ ಈ ವಿಷಯವಾಗಿ ಸಮೀರ್ ದೇಸಾಯಿ ವಿಷಯ ಮಂಡಿಸಿದರು.
ಕನ್ನಡ ಹಾಗೂ ರೀಡಿಂಗ್ ರೂಮ್ ವಿಭಾಗದ ಮುಖ್ಯಸ್ಥ ಪ್ರೊ. ಬಾಹುಬಲಿ ಜೈನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು. ಭರತ ಸ್ವಾಮಿ ನಿರೂಪಿಸಿದರು.