ಕನ್ನಡಪ್ರಭ ವಾರ್ತೆ ಬೆಳಗಾವಿ

ಭವಿಷ್ಯದ ಎಂಜಿನಿಯರ್‌ಗಳು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವಂತ ಸಾಧನಗಳನ್ನು ಕಂಡುಹಿಡಿಯುವ ಮೂಲಕ ಜನರ ಬದುಕನ್ನು ಸರಳ ಮತ್ತು ಸುಲಭಗೊಳಿಸಬೇಕೆಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು), ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತಾ ಸಂಸ್ಥೆ(ವಿಆರ್‌ಐಎಫ್‌), ಎರಾ ಫೌಂಡೇಷನ್‌ ಸಹಯೋಗದಲ್ಲಿ ಜ್ಞಾನ ಸಂಗಮದಲ್ಲಿ ಆಯೋಜಿಸಿದ್ದ ವಿನ್ಯಾಸ ವಿದ್ಯಾರ್ಥಿಗಳ ಪಾಜೆಕ್ಟ್‌ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪ್ರಾಜೆಕ್ಟ್‌ ಪ್ರದರ್ಶನದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿರುವುದು ಖುಷಿ ವಿಚಾರ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಥಿಯೇರಿ ತರಗತಿಗಿಂತ ಪ್ರಾಯೋಗಿಕ ತರಗತಿಗಳ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ, ಈ ರೀತಿಯ ಪ್ರಾಜೆಕ್ಟ್‌ ಪ್ರದರ್ಶನಗಳು ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗೆ ಕಾರಣವಾಗಲಿದೆ ಎಂದರು.

ಪ್ರಾಜೆಕ್ಟ್‌ಗಳು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮದ ಒಂದು ಭಾಗವಾಗಬಾರದು. ಬದಲಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಿರಬೇಕು. ಕಾರಣ, ಯಾವುದೇ ಕ್ಷೇತ್ರಕ್ಕೆ ತೆರಳಿದರೂ, ಅಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಇವುಗಳನ್ನು ಅರಿತು ಅವರಿಗೆ ತಂತ್ರಜ್ಞಾನ ಯಾವ ರೀತಿಯಲ್ಲಿ ಅನುಕೂಲ ಮಾಡಿಕೊಡಬಹುದು ಎಂಬುದನ್ನು ತೋರಿಸಿಕೊಡಬೇಕು. ಆ ಮೂಲಕ ಜನರ ಬದುಕನ್ನು ಸರಳ ಮತ್ತು ಸುಲಭಗೊಳಿಸಬೇಕೆಂದರು.ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಮಾತನಾಡಿ, ನಾವು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಈ ಪ್ರಾಜೆಕ್ಟ್‌ಗಳ ಪ್ರದರ್ಶನ ಆಯೋಜಿಸಿದ್ದೇವೆ. ಇದು ಮೊದಲ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟ್‌ಗಳಾಗಿವೆ. ನಾವು ಇನೋವೇಷನ್‌ ಡಿಸೈನ್‌ ಥಿಂಕಿಂಗ್‌(ಐಡಿಟಿ) ಮೂಲಕ ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ನೀಡುತ್ತೇವೆ. ಪ್ರದರ್ಶಿಸಲಾಗಿರುವ ಪ್ರಾಜೆಕ್ಟ್‌ಗಳಲ್ಲಿ ಉತ್ತಮವಾದವುಗಳನ್ನು ಗುರುತಿಸಿ ಅದನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ನಾವು ಆರ್ಥಿಕ ಸಹಾಯ ಮಾಡುತ್ತೇವೆ. ಇನ್ಮುಂದೆ ನಾವು ಪ್ರತಿ ವರ್ಷ ಪ್ರಾಜೆಕ್ಟ್‌ ಪ್ರದರ್ಶನವನ್ನು ನಡೆಸುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವ ಪ್ರೊ.ಪ್ರಸಾದ ರಾಂಪೂರೆ, ವಿಆರ್‌ಐಎಫ್‌ನ ಆಪರೇಷನ್‌ ವಿಭಾಗದ ಮುಖ್ಯಸ್ಥ ಸಂತೋಷ್‌ ಇಟ್ಟಣಗಿ, ಪ್ರಾಧ್ಯಾಪಕ ಡಾ.ಹರೀಶ್‌ ಬೆಂಡಿಗೇರಿ ಇತರರು ಇದ್ದರು.ಬಾಕ್ಸ್‌.....


ವಿನೂತನ ಪ್ರಾಜೆಕ್ಟ್‌ಗಳ ಅನಾವರಣ

ವಿಟಿಯು ವ್ಯಾಪ್ತಿಯ ಘಟಕ ಕಾಲೇಜುಗಳಲ್ಲಿನ ಮೊದಲ ವರ್ಷದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು 120 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಕೃಷಿಕನಿಗೆ ನೆರವಾಗುವಂತಹ ಕಳೆ ತೆಗೆಯುವ ಮತ್ತು ಬೀಜ ಬಿತ್ತನೆ ಮಾಡುವಂತಹ ಸಾಧನ, ರೋಗಿಗಳ ಚೇತರಿಕೆಗೆ ಸಹಾಯ ಮಾಡುವಂತಹ ಸಾಧನ, ಚಳಿಗಾಲದ ಹಿಮವನ್ನು ನೀರಾಗಿ ಪರಿವರ್ತಿಸಲು ಬೇಕಾದ ತಂತ್ರಜ್ಞಾನ ಹೀಗೆ ನೂರಾರು ಪ್ರಾಜೆಕ್ಟ್‌ಗಳ ಪ್ರದರ್ಶನ ನಡೆಯಿತು. ವಿವಿಧ ಶಾಲೆಗಳ ಮಕ್ಕಳು ಈ ಪ್ರಾಜೆಕ್ಟ್‌ ಪ್ರದರ್ಶನದಲ್ಲಿ ಭಾಗವಹಿಸಿ ಹಲವು ಮಾಹಿತಿ ಪಡೆದುಕೊಂಡರು.