ಜಿಲ್ಲೆ ಮಕ್ಕಳ ಯೋಗಕ್ಷೇಮಕ್ಕಾಗಿ ಕ್ರೀಯಾ ಯೋಜನೆ ರೂಪಿಸಿ

| Published : Nov 11 2025, 01:45 AM IST

ಸಾರಾಂಶ

ಮಕ್ಕಳ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಶಿಕ್ಷಕರು, ಪೋಷಕರು, ಸ್ವ ಸಹಾಯ ಸಂಘ - ಸಂಸ್ಥೆಗಳು ಪರಸ್ಪರ ಕೈಜೋಡಿಸಬೇಕು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ ೧೪೪೧೬ ಪ್ರತಿಯೊಂದು ಶಾಲಾ - ಕಾಲೇಜುಗಳು, ವಸತಿ ನಿಲಯ, ಕೋಚಿಂಗ್ ಸೆಂಟರ್‌ಗಳ ಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ಕುಮಾರಿ ಸೂಚನ

ಸಹಾಯವಾಣಿ ಸಂಖ್ಯೆ 14416 ಶಾಲೆ-ಕಾಲೇಜಲ್ಲಿ ಅಳವಡಿಸಲು ಆದೇಶ

ಕನ್ನಡಪ್ರಭವಾರ್ತೆ, ಹಾಸನ

ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷತೆ, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸಮಗ್ರ ಕ್ರೀಯಾ ಯೋಜನೆ ತಯಾರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಶಿಕ್ಷಕರು, ಪೋಷಕರು, ಸ್ವ ಸಹಾಯ ಸಂಘ - ಸಂಸ್ಥೆಗಳು ಪರಸ್ಪರ ಕೈಜೋಡಿಸಬೇಕು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ ೧೪೪೧೬ ಪ್ರತಿಯೊಂದು ಶಾಲಾ - ಕಾಲೇಜುಗಳು, ವಸತಿ ನಿಲಯ, ಕೋಚಿಂಗ್ ಸೆಂಟರ್‌ಗಳ ಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಿದರು.

ಖಾಸಗಿ ಆಸ್ಪತ್ರೆಗಳು, ಸ್ಕೌಟ್ ಅಂಡ್ ಗೈಡ್ಸ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಗೂ ಮತ್ತಿತರ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಕ್ರಿಯಾತ್ಮಕವಾಗಿ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡುವುದರ ಜೊತೆಗೆ ಪರೀಕ್ಷಾ ಸಿದ್ಧತೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸಲು ಕ್ರಮವಹಿಸಬೇಕು. ರಾಷ್ಟ್ರೀಯ ಆತ್ಮಹತ್ಯೆ ತಡೆ ಬಗ್ಗೆಯೂ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ಆಯೋಜಿಸುವ ಮೂಲಕ ಅರಿವು ಮೂಡಿಸಲು ನಿರ್ದೇಶನ ನೀಡಿದರು.ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲಾ ಕಾಲೇಜುಗಳಲ್ಲಿ ಸಮಾಲೋಚಕರನ್ನು ನೇಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕುವಾರು ಪಟ್ಟಿಯನ್ನು ಪಡೆಯಬೇಕು. ಎಲ್ಲ ಮಕ್ಕಳ ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಕ್ರಮವಹಿಸುವುದರ ಜೊತೆಗೆ ಸಮಸ್ಯೆ ಕಂಡು ಬಂದ ಮಕ್ಕಳಿಗೆ ಸಮರ್ಪಕವಾಗಿ ಆಪ್ತ ಸಮಾಲೋಚನೆ ನಡೆಸುವ ಮೂಲಕ ಮಕ್ಕಳ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಬೋಧಕ, ಬೋಧಕೇತರ ಆಡಳಿತ ಮಂಡಳಿಯವರಿಗೂ ಸಹ ಮಾನಸಿಕ ಆರೋಗ್ಯ ಕುರಿತು ಸಂವಹನ ತರಬೇತಿಯನ್ನು ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ರ್‍ಯಾಗಿಂಗ್‌ನಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ರ್‍ಯಾಗಿಂಗ್ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಹಾಸ್ಟೇಲ್ ವಾರ್ಡನ್‌ಗಳಿಗೆ ಜವಾಬ್ದಾರಿ ನಿಗದಿಪಡಿಸಿ ಸುತ್ತೋಲೆ ಹೊರಡಿಸಬೇಕು. ಲೈಗಿಂಕ ದೌರ್ಜನ್ಯ, ಕಿರುಕುಳವನ್ನು ತಡೆಯಲು ಹೇಗೆ ಪ್ರತಿಸ್ಪಂದಿಸಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು. ಮಕ್ಕಳ ಮಾನಸಿಕ ಒತ್ತಡ ಹೊರಹಾಕಲು ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು. ಕಡ್ಡಾಯವಾಗಿ ಒಂದು ಮಗು ಒಂದು ಕ್ರೀಡೆ ಕಲಿಯಲೇಬೇಕು. ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ವಾರಕ್ಕೆ ಎಷ್ಟು ಸಮಯ ನೀಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೋಷಕರ ಪಾಲಕರ ಪಾತ್ರ ತುಂಬಾ ಇರುತ್ತದೆ ಎಂದು ತಿಳಿಸಿದರು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆ, ವಸತಿ ನಿಲಯಗಳಲ್ಲಿ ಟ್ಯಾಂಪರ್ ಪ್ರೋಫ್, ಬಾಲ್ಕನಿಯ ಪ್ಯಾರಫಿಟ್ ಎತ್ತರಿಸುವುದು, ಹೈಟೆನ್ಷನ್ ವೈಯರ್, ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ ಕೈಗೆಟಕುವ ರೀತಿಯಲ್ಲಿರದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಕೋಚಿಂಗ್ ಸೆಂಟರ್‌ಗಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಏನೇನು ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ವರದಿ ಪಡೆಯುವಂತೆ ನಿರ್ದೇಶನ ನೀಡಿದರಲ್ಲದೆ, ನೋಡಲ್ ಅಧಿಕಾರಿಯನ್ನು ನೇಮಿಸಿ ಅನುಪಾಲನ ವರದಿ ನೀಡುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಚಂದ್ರಮೌಳಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಲರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಗಂಗಾಧರ್ ಇದ್ದರು.