ಸಾರಾಂಶ
ಚಿತ್ರದುರ್ಗ ನಗರದ ಡಯಟ್‌ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ ಉದ್ಘಾಟಿಸಿದರು.
ಕನಡಪ್ರಭ ವಾರ್ತೆ ಚಿತ್ರದುರ್ಗ
ಶಿಕ್ಷಕರು ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಸಂವಹನಾ ಕೌಶಲ್ಯ ಬೆಳೆಸಬೇಕು ಎಂದು ಡಯಟ್ ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ ಹೇಳಿದರು.ನಗರದ ಡಯಟ್‌ನಲ್ಲಿ ಡಿಎಸ್ಇಆರ್‌ಟಿ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಭಾಷಾ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ನಿರಂತರ ಅಧ್ಯಯನಶೀಲರಾದಾಗ ಬೋಧನಾ ಕೌಶಲ್ಯವನ್ನು ರೂಢಿಸಿಕೊಂಡು ಉತ್ತಮ ಬೋಧಕರಾಗಲು ಸಾಧ್ಯವಾಗುತ್ತದೆ. ಧನಾತ್ಮಕ ಚಿಂತನೆ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆ ಕಲಿಕೆ ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನುಕೂಲವಾಗಲೆಂದು ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಇಲ್ಲಿ ಕಲಿತ ಅಂಶಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡುವುದರ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಜತೆಗೆ ಇಂಗ್ಲೀಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಬೇಕು. ಇದರಿಂದ ಉನ್ನತ ಶಿಕ್ಷಣ ಪಡೆಯಲು ಮಕ್ಕಳಿಗೆ ಸುಲಭವಾಗುತ್ತದೆ ಎಂದು ತಿಳಿಸಿದರು.ಶಿಬಿರದ ನಿರ್ದೇಶಕ ರೇವಣ್ಣ ಎಲ್.ಮಾತನಾಡಿ, ಭಾಷೆ ಭಾವನೆಗಳನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿದೆ. ಮನುಷ್ಯ ತನ್ನಲ್ಲಿನ ಆಲೋಚನೆ, ಚಿಂತನೆಗಳನ್ನು ವ್ಯಕ್ತಪಡಿಸಲು ಭಾಷೆ ಸಹಕಾರಿಯಾಗುತ್ತದೆ. ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸ್ಪಷ್ಟವಾಗಿ, ಶುದ್ಧವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಅರ್ಜುಮಂದ್ ಬಾನು, ಉಪನ್ಯಾಸಕರಾದ ಎಸ್.ಬಸವರಾಜು, ಬಿ.ಎಸ್. ನಿತ್ಯಾನಂದ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಜಿ.ನಾಗರಾಜು, ಸುಂದರ್ ರಾಜು, ಮಂಜುನಾಥ್, ರಂಜಿತಾ, ಸ್ಮಿತಾ, ಪ್ರಕಾಶ್, ರಾಧಾ ಮತ್ತು ಶಿಕ್ಷಕರು ಇದ್ದರು.