ಸಾರಾಂಶ
ಸಮಾಜ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾದರಿ ನಿರ್ಮಾಣ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ.
ಸಮಾಜ ವಿಜ್ಞಾನ ವಿಷಯದ ವಸ್ತು ಪ್ರದರ್ಶನದ ಉದ್ಘಾಟಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕೊಪ್ಪಳಸಮಾಜ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾದರಿ ನಿರ್ಮಾಣ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಸಮಾಜ ವಿಜ್ಞಾನ ವಿಷಯದ ವಸ್ತು ಪ್ರದರ್ಶನದ ಉದ್ಘಾಟಿಸಿ ಮಾತನಾಡಿದರು.ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ವಿಭಿನ್ನಾತ್ಮಕ ಆಲೋಚನೆ ಮತ್ತು ಚಿಂತನೆಯನ್ನು ಬೆಳೆಸುವ ಮೂಲಕ ಮಕ್ಕಳ ಅನುಭವಪೂರಿತವಾದ ಕಲಿಕೆಗೆ ಸಹಾಯಕಾರಿ ಆಗುತ್ತದೆ ಎಂದರು.
ಶಾಲೆಯ ಆಡಳಿತಾಧಿಕಾರಿ ಗವಿಸಿದ್ಧಪ್ಪ ವಿ.ಕೊಪ್ಪಳ ಮಾತನಾಡಿ, ಕಲಿಕೆಯಲ್ಲಿ ಪಠ್ಯ ವಿಷಯದ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳನ್ನು ಸದಾ ಕ್ರಿಯಾಶೀಲರನ್ನಾಗಿ ಮಾಡುತ್ತವೆ. ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಗಳ ವಿವರಣೆಯನ್ನು ನೀಡಿದರು. ಚನ್ನಬಸಪ್ಪ ಹೊಳೆಯಪ್ಪನವರ ಹಾಗೂ ಲಲಿತ್ ಜೈನ್ ಇತರರಿದ್ದರು. ಶಾಲಾ ಮುಖ್ಯ ಗುರು ಅಮರೇಶ ಎ. ಕರಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಕೆ. ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಶಿಕ್ಷಕರಾದ ದೇವಪ್ಪ ಜಿ. ಸ್ವಾಗತಿಸಿದರು. ಎಚ್.ಎಂ. ವಂದಾಲಿ ಪರಿಚಯಿಸಿದರು. ರವಿ ಎನ್.ರಂಜಣಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಂ. ಗಾಳಿ ವಂದಿಸಿದರು.ಗವಿಸಿದ್ಧಪ್ಪ ಹತ್ತಿ ನಿರೂಪಿಸಿದರು.