ಸಿಸಿ ರಸ್ತೆಯಾಗಿ ಗುಂಡಿಮಯ ರಾಜ್ಯ ಹೆದ್ದಾರಿ ಅಭಿವೃದ್ಧಿ: ಶಾಸಕ ಹರೀಶ್

| Published : Sep 17 2025, 01:05 AM IST

ಸಿಸಿ ರಸ್ತೆಯಾಗಿ ಗುಂಡಿಮಯ ರಾಜ್ಯ ಹೆದ್ದಾರಿ ಅಭಿವೃದ್ಧಿ: ಶಾಸಕ ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡಿಮಯವಾಗಿರುವ ನಗರದ ಹೊರವಲಯದ ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ೧.೩ ಕಿ.ಮೀ. ವ್ಯಾಪ್ತಿವರೆಗೆ ದ್ವಿಪಥದ ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ (ಸಿಸಿ ರಸ್ತೆ) ಅಭಿವೃದ್ಧಿಯಾಗಲಿದೆ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಗುಂಡಿಮಯವಾಗಿರುವ ನಗರದ ಹೊರವಲಯದ ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ೧.೩ ಕಿ.ಮೀ. ವ್ಯಾಪ್ತಿವರೆಗೆ ದ್ವಿಪಥದ ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ (ಸಿಸಿ ರಸ್ತೆ) ಅಭಿವೃದ್ಧಿಯಾಗಲಿದೆ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.

ನಗರದ ಎಲ್‌ಐಸಿ ಕಚೇರಿಯಿಂದ ಬೈಪಾಸ್ ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಲೋಕೋಪಯೋಗಿ ಇಲಾಖೆ ಅನುದಾನದಡಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸುವ ಮೂಲಕ‌ ಚಾಲನೆ ನೀಡಿದರು.

ಪಿಡಬ್ಲ್ಯುಡಿ ಇಲಾಖೆಯ ಅಂಗಸಂಸ್ಥೆಯಾದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ (ಎಸ್‌ಎಚ್‌ಡಿಪಿ) ಕಾಮಗಾರಿ ನಡೆಯಲಿದ್ದು, ೧೦ ಕೋಟಿ ರು. ಮೊತ್ತಕ್ಕೆ ಟೆಂಡರ್ ಪ್ರಕ್ರಿಯೆ ಆಗಿದೆ. ಹೊರವಲಯದ ಎಲ್‌ಐಸಿ ಕಚೇರಿಯಿಂದ ಬೈಪಾಸ್ ಕಡೆಯ ಇಂಡಿಯನ್ ಫೌಂಡ್ರಿ (ಮಾಶಾ ಅಲ್ಲಾಹ್ ಕಟ್ಟಡ) ವರೆಗಿನ ಡಾಂಬರು ರಸ್ತೆಯ ಜಾಗದಲ್ಲಿ ಸುಸಜ್ಜಿತ ದ್ವಿಪಥದ ಸಿಸಿ ರಸ್ತೆ ನಿರ್ಮಾಣವಾಗಲಿದೆ ಎಂದರು.

ಕಾಮಗಾರಿಯ ಉದ್ದ ೧.೩ ಕಿ.ಮೀ. (೧೩೦೦ ಮೀ.) ಇರಲಿದೆ, ದ್ವಿಪಥದ ತಲಾ ಒಂದು ಬದಿಯಲ್ಲಿ ೭.೫ ಮೀ. ಅಗಲದ ರಸ್ತೆ, ಮಧ್ಯದಲ್ಲಿ ೧.೨ ಮೀ. ವಿಭಜಕ (ಮೀಡಿಯನ್), ಎರಡೂ ಬದಿ ತಲಾ ೧.೬೫ ಮೀ. ಅಗಲದ ಭುಜ (ಶೋಲ್ಡರ್) ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದರೂ ರಾಷ್ಟ್ರೀಯ ಹೆದ್ದಾರಿಯಷ್ಟೆ ವಾಹನ ದಟ್ಟಣೆ ಇದೆ. ಈ ಭಾಗದಲ್ಲಿ ರಸ್ತೆ ನಿರ್ಮಿಸಿ ಒಂದೆ ಮಳೆಗಾಲಕ್ಕೆ ಗುಂಡಿಗಳು ಸೃಷ್ಟಿಯಾಗುತ್ತದೆ. ಸುತ್ತಲಿನ ಗ್ರಾಮೀಣ ಭಾಗದ ಜನತೆ ಹಾಗೂ ಹೊರ ಭಾಗದ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದರು.

ಕನಿಷ್ಠ ೧.೩ ಕಿ.ಮೀ. ಉದ್ದಕ್ಕೆ ಸುಸಜ್ಜಿತ ಸಿಸಿ ರಸ್ತೆಯಾಗಿ ಅಭಿವೃದ್ಧಿ ಆಗಲಿರುವುದು ನಗರ ಹಾಗೂ ಗ್ರಾಮಾಂತರ ಜನತೆಗೆ ಸಂತಸ ತರಲಿದೆ ಎಂದರು. ಒಮ್ಮುಖ ಸಂಚಾರ (ಒನ್‌ವೇ) ಆಗುವುದರಿಂದ ಈ ಪ್ರದೇಶದಲ್ಲಿ ಇನ್ನು ಮುಂದೆ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಆದಷ್ಟು ಬೇಗ ಆರಂಭಿಸಿ, ಟೆಂಡರ್‌ನಲ್ಲಿ ನಿಗದಿ ಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ರಸ್ತೆ ನಗರಕ್ಕೆ ಅಂಟಿಕೊಂಡಿರುವ ವಿಭಜಕದಲ್ಲಿ ಬೀದಿ ದೀಪಗಳ ವ್ಯವಸ್ಥೆ, ನಗರದ ಗಾಂಧಿ ಸರ್ಕಲ್‌ನಿಂದ ಬೈಪಾಸ್‌ನ ಸಿದ್ಧವೀರಪ್ಪ ಸರ್ಕಲ್‌ವರೆಗಿನ ೪ ಕಿ.ಮೀ. ರಸ್ತೆ ಗುಂಡಿಮಯವಾಗಿದ್ದು, ಈ ಇಡೀ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿದ್ದು, ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಅಜೀತ್ ಸಾವಂತ್, ಮುಖಂಡ ಬಾತಿ ಚಂದ್ರಶೇಖರ್, ರಾಜು ರೋಕಡೆ, ನಗರ ಸಭೆ ಸದಸ್ಯರಾದ ಹನುಮಂತಪ್ಪ, ಶೇರಾಪುರದ ಅಜ್ಜಪ್ಪ, ಗಿರಿಗೌಡ್ರು, ನಂದಿಗಾವಿ ರಮೇಶ್, ಚಂದ್ರಕಾಂತ್, ನವೀನ್, ಸಂತೋಷ ರಾಜನಹಳ್ಳಿ, ಮುಖಂಡರು ಹಾಜರಿದ್ದರು.