ಸಾರಾಂಶ
ಶಿರಹಟ್ಟಿ: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಬೆಳೆಸುವುದು ಮತ್ತು ಪ್ರಾಯೋಗಿಕ ಜ್ಞಾನದ ಅಭಿರುಚಿ ರೂಢಿಸಿಕೊಳ್ಳಲು ವಿಜ್ಞಾನ ಪ್ರದರ್ಶನ ಚಟುವಟಿಕೆಗಳು ಸಹಾಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಹೇಳಿದರು.
ತಾಲೂಕಿನ ರಣತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ವಿಜ್ಞಾನ ವಿಷಯಗಳ ಕಲಿಕೆಗೆ ಮಾದರಿಗಳು ಅತ್ಯವಶ್ಯಕ. ಮಾದರಿಗಳ ಮೂಲಕ ಪ್ರಯೋಗಶೀಲತೆ, ದತ್ತಾಂಶ ಶೇಖರಣೆ ವಿಶ್ಲೇಷಣೆ ಪ್ರಯೋಗದ ಕುರಿತು ನಿರ್ಧಾರಿತ ತೀರ್ಮಾನ ಕೈಗೊಳ್ಳುವುದು ಮುಂತಾದ ಕೌಶಲ್ಯ ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ವಿಜ್ಞಾನ ಮಾದರಿ ತಯಾರಿಸುವುದು ಸುಲಭದ ಮಾತಲ್ಲ. ವಿಜ್ಞಾನದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಇಂತಹ ಮಾದರಿ ಗರಚಿಸುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದುವಂತೆ ವೇದಿಕೆ ರೂಪಿಸಬೇಕು. ಹೊಸ ಹೊಸ ಪ್ರಯೋಗ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು. ಶಿಕ್ಷಣ ಕೇವಲ ಅಂಕ ಗಳಿಸುವಂತೆ ಆಗದೆ ಅವರ ಜ್ಞಾನಾರ್ಜನೆಗೆ ಅವಕಾಶ ನೀಡುವಂತೆ ಆಗಬೇಕು ಎಂದರು.
ವಿದ್ಯಾರ್ಥಿಗಳಿಗೆ ವಿಜ್ಞಾನ ಮಹತ್ವ ತಿಳಿಸಲು ಮತ್ತು ವೈಜ್ಞಾನಿಕ ಯುಗದ ಕಲ್ಪನೆ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ನೀಡಲಾಗುವುದು. ಇದರಿಂದ ಮಕ್ಕಳ ಜ್ಞಾನವೃದ್ದಿಯಾಗುತ್ತದೆ. ವಿಜ್ಞಾನದಿಂದ ವೈಚಾರಿಕ ಮನೋಭಾವ ಬೆಳೆಯುತ್ತದೆ. ಸರಿ ತಪ್ಪು ಗುರುತಿಸಿ ಸೃಜನಶೀಲತೆ ಮೂಲಕ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಈಶ್ವರ ಮೆಡ್ಲೇರಿ ಮಾತನಾಡಿ, ಮಳೆ ನೀರು ಸಂಗ್ರಹ, ಸಾವಯವ ಬೆಳೆಯ ಬೀಜಗಳು, ಗೃಹಗಳ ಮಾದರಿ, ಪರಿಸರ ಸಂರಕ್ಷಣೆ ವಿಧಾನಗಳು, ದೈನಂದಿನ ಜೀವನದಲ್ಲಿ ಹೇಗೆ ಬಳಕೆಗೆ ಬರುತ್ತದೆ ಎನ್ನುವ ಕುರಿತು ಮಕ್ಕಳಿಗೆ ತಿಳಿಸಿದ ಅವರು, ವಿಜ್ಞಾನದಿಂದ ವೈಚಾರಿಕ ಮನೋಭಾವ ಬೆಳೆಯುತ್ತದೆ ಎಂದರು.
ವಿಜ್ಞಾನ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಮಾನವೀಯ ಮೌಲ್ಯಗಳೊಂದಿಗೆ ಇದನ್ನು ಕಂಡುಕೊಳ್ಳಬೇಕು. ಕಲಿಕೆ, ಬದುಕು, ಸಹಬಾಳ್ವೆಗಾಗಿ ಅಲ್ಲದೇ ಆರೋಗ್ಯವಂತ ಜೀವನ ಸೇರಿದಂತೆ ಉತ್ತಮ ಪರಿಸರಕ್ಕಾಗಿ ವೈಜ್ಞಾನಿಕ ಜ್ಞಾನ ಮುಖ್ಯವಾಗಿದೆ. ಪ್ರತಿ ಮಗುವಿನಲ್ಲಿ ಸೃಜನಶೀಲತೆ ಬೆಳೆಸಿ ಮಗುವಿನಲ್ಲಿ ವೈಚಾರಿಕತೆ ಮೂಡಿಸುವ ಕಾರ್ಯ ಶಿಕ್ಷಕರ ಮೇಲಿದ್ದು, ಅದರಂತೆ ಮಕ್ಕಳು ಉತ್ತಮ ಕನಸು ಕಾಣಿ ಅವುಗಳನ್ನು ಸಾಕಾರಗೊಳಿಸಲು ಶ್ರಮಪಡಬೇಕು ಎಂದು ಹೇಳಿದರು.ಪ್ರತಿಯೊಬ್ಬ ಮಗುವಿನೊಳಗೆ ಸೃಜನಶೀಲತೆ ಸೂಪ್ತವಾಗಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಲು ಇಂತಹ ವೇದಿಕೆ ಕಲ್ಪಿಸುವುದು ಅತ್ಯಂತ ಅಗತ್ಯ. ಮಕ್ಕಳಿಗೆ ಪಠ್ಯ ಜ್ಞಾನದ ಜತೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಜ್ಞಾನ ನೀಡುವುದು ಶಿಕ್ಷಣ ಮೂಲತತ್ವವಾಗಿದೆ.
ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಬಸಪ್ಪ ದಾನಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಪಿ ಬಸವರಾಜ ಯರಗುಪ್ಪಿ, ಸಿಆರ್‌ಪಿ ಗೀತಾ ಸರವಿ, ಮಹಾಂತೇಶ, ಶಂಕರ ರಾಠೋಡ, ವಿಜಯಕುಮಾರ ಅಂಗಡಿ, ರೇಷ್ಮಾ, ಎಂ.ಗಂಗಮ್ಮ, ನಾಗರಾಜ ಕಡೇಮನಿ, ದೇವೇಂದ್ರ, ಪರಪ್ಪ ಕರಿಗಾರ ಇದ್ದರು.