ಸಾರಾಂಶ
ಶಿವಮೊಗ್ಗದ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕ ಡಾ.ಉಮೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ:
ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬರೂ ಆಚರಿಸುವ ಮೂಲಕ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ(ಪದವಿ ಪೂರ್ವ) ಉಪ ನಿರ್ದೇಶಕ ಡಾ.ಉಮೇಶ್ ಹೇಳಿದರು.ನಗರದ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದ್ದರೂ ಕೂಡ ಇಂದು ಆತಂಕ ಎದುರಾಗಿದೆ. ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ನಾವೇ ಹೋರಾಟ ಮಾಡಬೇಕಾಗಿ ಬಂದಿರುವುದು ವಿಪರ್ಯಾಸವಾಗಿದೆ. ಕನ್ನಡಿಗರ ಉದಾರೀಕರಣದಿಂದಲೇ ಇತರ ಭಾಷೆಗಳು ಕರ್ನಾಟಕದಲ್ಲಿ ವಿಜೃಂಭಿಸಲು ಕಾರಣವಾಗಿದೆ ಎಂದು ಹೇಳಿದರು.
ಕನ್ನಡ ಅನ್ನದ ಭಾಷೆ ಹಾಗೂ ಆಡಳಿತ ಭಾಷೆಯಾಗಬೇಕು ಆದ್ದರಿಂದ ರಾಜಕೀಯ ಇಚ್ಛಾಶಕ್ತಿಯ ಜೊತೆಗೆ ಕನ್ನಡಿಗರ ಹೋರಾಟವೂ ಬೇಕಾಗುತ್ತದೆ. ಕನ್ನಡಿಗರಾಗಿ ನಮ್ಮ ಜವಾಬ್ದಾರಿ ನಾವು ಅರಿತುಕೊಳ್ಳಬೇಕು. ಇದು ಭಾಷೆಗೆ ಸಲ್ಲಿಸುವ ಗೌರವವಾಗಿದೆ. ಭಾಷೆ ಕೇವಲ ಸಂವಹನ ಅಲ್ಲ, ಅದೊಂದು ಸಂಸ್ಕೃತಿ. ನಮ್ಮ ಬದುಕಿನ ಜೊತೆ ಮಿಲನಗೊಂಡಿದೆ. ನಮ್ಮ ಕನ್ನಡವನ್ನು ಉಳಿಸಿದ ಕೀರ್ತಿ ನಮ್ಮ ಹಳ್ಳಿಗರಿಗೆ ಸೇರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಎಚ್.ರಾಜು ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಅಕಾಡೆಮಿ ಆಫ್ ಎಜುಕೇಷನ್‌ನ ಗೌರವ ಕಾರ್ಯದರ್ಶಿ ಎಸ್.ಪಿ.ಜಗನ್ನಾಥ್, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರೊ.ಚೇತನ್ ಸೇರಿದಂತೆ ಹಲವರು ಇದ್ದರು.
ಆಕಾಶವಾಣಿ ಕಲಾವಿದರಾದ ವಿದ್ಯಾ ಮಂಜುನಾಥ್ ಮತ್ತು ಸಂಗಡಿಗರಿಂದ ಗೀತಗಾಯನ ನಡೆಯಿತು.