ಸಾರಾಂಶ
ಇಂದಿನ ಯುವಕರಿಗೆ ನಾಯಕತ್ವ ಗುಣ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡುವ ಅಗತ್ಯವಿದ್ದು, ಮಹಿಳೆಯರಿಗೆ ನಾಯಕತ್ವದ ಅವಕಾಶ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿಗಳಾದ ಹನುಮಂತ ಮರಗಡಿ ಹೇಳಿದರು.
ಹಾನಗಲ್ಲ: ಇಂದಿನ ಯುವಕರಿಗೆ ನಾಯಕತ್ವ ಗುಣ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡುವ ಅಗತ್ಯವಿದ್ದು, ಮಹಿಳೆಯರಿಗೆ ನಾಯಕತ್ವದ ಅವಕಾಶ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿಗಳಾದ ಹನುಮಂತ ಮರಗಡಿ ಹೇಳಿದರು.
ತಾಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ಲೋಯಲಾ ವಿಕಾಸ ಕೇಂದ್ರ ಆಯೋಜಿಸಿದ್ದ ಮಹಿಳೆಯರಿಗೆ ನಾಯಕತ್ವ ಕೌಶಲ್ಯ ಅಭಿವೃದ್ಧಿ ಮತ್ತು ಸಂಘಟನೆಯ ಮಹತ್ವ, ಕೆನರಾ ಬ್ಯಾಂಕ್ ಸೌಲಭ್ಯ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸರ್ಕಾರದಿಂದ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳಿಂದ ತರಬೇತಿ ಪಡೆದು ಕೌಶಲ್ಯಗಳನ್ನು ಬೆಳೆಸಿಕೊಂಡರೆ ಹೆಚ್ಚು ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಉದ್ಯೋಗ ಮಾಡುವಲ್ಲಿ ಸದುಪಯೋಗ ಮಾಡಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯ. ನಾಯಕತ್ವಕ್ಕೆ ಧೈರ್ಯವೂ ಬೇಕು. ಉತ್ತಮ ಸಂವಹನ, ನೈತಿಕತೆ, ಸಮಸ್ಯೆಗಳಿಗೆ ಪರಿಹಾರದ ಶಕ್ತಿ, ಉತ್ತಮ ಗುಣಗಳಿಂದ ಮಾತ್ರ ನಾಯಕತ್ವ ಗಟ್ಟಿಗೊಳ್ಳಬಲ್ಲದು ಎಂದು ಹೇಳಿದರು.ಕೆನರಾ ಬ್ಯಾಂಕ್ ಸಂಯೋಜಕ ಅಬ್ದುಲ್ ಫಾರೂಕ್ ಮಾತನಾಡಿ, ಮಹಿಳೆಯರು ಸಂಘಗಳಲ್ಲಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಗುಂಪು ಸ್ವಯಂ ಉದ್ಯೋಗ ಚಟುವಟಿಕೆ ಮೂಲಕ ಮತ್ತು ವೈಯಕ್ತಿಕ ಸ್ವಯಂ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು. ಅಭಿವೃದ್ಧಿಯ ಜತೆಗೆ ನೈತಿಕತೆ ಇರಲಿ. ಹಳ್ಳಿಗಳಿಂದ ದೂರದ ಪಟ್ಟಣಗಳಿಗೆ ವಲಸೆ ಹೋಗುವುದು ಬೇಡ. ಇಲ್ಲಿಯೇ ಉದ್ಯೋಗವಕಾಶ ಪಡೆಯಲು ಸಾಧ್ಯ. ಇದಕ್ಕೆ ಬ್ಯಾಂಕ್ ಮೂಲಕ ಉತ್ತಮ ಸಹಕಾರ ನೀಡುತ್ತೇವೆ ಎಂದರು.
ಲಕ್ಷ್ಮೀ ಮಾಳಾಪುರ, ಈರಪ್ಪ ಬಸಾಪುರ ಉಪಸ್ಥಿತರಿದ್ದರು. ಮಂಜುಳಾ ನಾಗೋಜಿ ಸ್ವಾಗತಿಸಿದರು. ಲೊಯೋಲ ವಿಕಾಸ ಕೇಂದ್ರದ ಪಿರಪ್ಪ ಶಿರ್ಶಿ ಕಾರ್ಯಕ್ರಮ ನಿರೂಪಿಸಿದರು. ಪರವೀನಬಾನು ಚಿನ್ನಳ್ಳಿ ವಂದಿಸಿದರು.