ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕಗಳನ್ನು ಕೊಟ್ಟು ಸಾಹಿತ್ಯಾಭಿರುಚಿಯನ್ನು ಬೆಳೆಸಿದಲ್ಲಿ ಮಾತ್ರ ಸದೃಡ ಸಮಾಜ ನಿರ್ಮಾಣ ಸಾದ್ಯ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದರು.ಶನಿವಾರ ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ ನೂತನ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯಿಕವಾಗಿ ಶಿವಮೊಗ್ಗ ಜಿಲ್ಲೆ ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದು, ಜ್ಞಾನಪೀಠ ಪ್ರಶಸ್ತಿ ಸಾಹಿತಿ, ರಾಷ್ಟ್ರಕವಿಗಳ ನಾಡು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದ ಅವರು, ಕನ್ನಡದ ಮುಖ್ಯಮಂತ್ರಿ ಎಂಬ ಹಿರಿಮೆ ಹೊಂದಿದ್ದ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಕನ್ನಡ ಸಾಹಿತ್ಯ ಭವನಗಳ ನಿರ್ಮಾಣಕ್ಕೆ ಅನುದಾನ ಹೆಚ್ಚಿಸಿದ್ದನ್ನು ನಾವು ಸ್ಮರಿಸಬೇಕು. ಅದೇ ರೀತಿ ಶಿಕಾರಿಪುರದಲ್ಲಿ ಕನ್ನಡ ಭವನಕ್ಕಾಗಿ ರು.50 ಲಕ್ಷ ನೀಡಲಾಗಿದ್ದು, ಇನ್ನು ಹೆಚ್ಚಿನ ಸೌಕರ್ಯಕ್ಕಾಗಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಾಹಿತ್ಯಾತ್ಮಕ ಚಟುವಟಿಕೆಗಳಿಗೆ ಭವನವನ್ನು ಬಳಸಿಕೊಂಡು ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ಬೆಳೆಸುವಲ್ಲಿ ಕನ್ನಡ ಕಟ್ಟಾಳುಗಳು ಕೈಜೋಡಿಸಬೇಕೆಂದರು.
ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಬಹುನಿರೀಕ್ಷಿತ ಈ ಕನ್ನಡ ಭವನ ಉದ್ಘಾಟನೆಗೊಂಡಿರುವುದು ಸಂತೋಷಕರ ಸಂಗತಿಯಾಗಿದ್ದು, ತಾಳಗುಂದದ ಮೊದಲ ಶಾಸನದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ನಮ್ಮ ತಾಲೂಕಿನಲ್ಲಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸುವುದರ ಜೊತೆಗೆ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಕರ್ತವ್ಯ ಮತ್ತು ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದ ಅವರು, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಕಾವ್ಯ ಕಾದಂಬರಿಗಳು ಮರೆಯಾಗುತ್ತಿದ್ದು, ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಾಹಿತ್ಯ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ದೇಶದಲ್ಲಿ ಶೋಷಿತ ಮಹಿಳೆಯರ ಪರ ಧ್ವನಿ ಎತ್ತಿದ ಅಕ್ಕಮಹಾದೇವಿ ತಾಲೂಕಿನವರು ಎಂಬ ಹೆಮ್ಮೆ ನಮ್ಮದು. ಹಿಂದಿನ ಕಾಲದಲ್ಲಿ ಮದುವೆ ಇತರೆ ಶುಭ ಕಾರ್ಯಗಳಲ್ಲಿ ಜಾನಪದ ಸಾಹಿತ್ಯ ಹಾಡುವುದರ ಮೂಲಕ ಉತ್ತಮ ಸಂದೇಶ ನೀಡುತ್ತಿದ್ದರು. ಇಂದು ಅದು ನಶಿಸುತ್ತಿರುವುದು ಬೇಸರದ ಸಂಗತಿ ಎಂದರು.
ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೆ ತಾಲೂಕಿಗೆ ರು. 50 ಸಾವಿರ, ಜಿಲ್ಲೆಗೆ ರು. 3 ಲಕ್ಷ ನೀಡುತ್ತಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ತಾಲೂಕಿಗೆ ರು.1 ಲಕ್ಷ, ಜಿಲ್ಲೆಗೆ ರು.5 ಲಕ್ಷಕ್ಕೆ ಹೆಚ್ಚಿಸಿದ್ದಾರೆ, ಇದೀಗ ನೂತನ ಭವನ ಉದ್ಘಾಟನೆ ಮೂಲಕ ಹಲವು ದಿನದ ಸಾಹಿತ್ಯಾಸಕ್ತರ ಬೇಡಿಕೆ ಪೂರ್ಣಗೊಂಡಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಾ ಕ.ಸಾ.ಪ ಅಧ್ಯಕ್ಷ ಎಚ್ಎಸ್ ರಘು ಮಾತನಾಡಿ, ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣ ದೀರ್ಘ ಕಾಲದ ಬೇಡಿಕೆಯಾಗಿದ್ದು, ಯಡಿಯೂರಪ್ಪನವರು ಹಾಗೂ ಸಂಸದ ರಾಘವೇಂದ್ರ ಅವರ ವಿಶೇಷ ಕಾಳಜಿಯಿಂದಾಗಿ ನಿರ್ಮಾಣವಾಗಿರುವುದು ಅತ್ಯಂತ ಸಂತೋಷ ಸಂಗತಿಯಾಗಿದ್ದು, ಭವನ ನಿರ್ಮಾಣದಲ್ಲಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ಸಂ.ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಸುನಂದಾ, ಲಕ್ಷ್ಮಿ ಮಹಾಲಿಂಗಪ್ಪ, ಜಿಲ್ಲಾ ಪ್ರ.ಕಾ.ವಿ.ಟಿ ಸ್ವಾಮಿ, ತೀರ್ಥಹಳ್ಳಿ ಕ.ಸಾ.ಪ.ಅಧ್ಯಕ್ಷ ರಮೇಶ್ ಶೆಟ್ಟಿ, ಸೊರಬ ತಾ.ಮಾಜಿ ಅಧ್ಯಕ್ಷ ಶಿವಾನಂದ ಪಾಣಿ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಪಯ್ಯ, ಕನ್ನಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನರಸಿಂಹಸ್ವಾಮಿ, ತಾ.ಪರ್ತಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಸುದರ್ಶನ್, ಮಲ್ಲಿಕಾರ್ಜುನ ಕಾನೂರ್, ಅಂಗಡಿ ಜಗದೀಶ್ ಮುಖಂಡ ಸುಧೀರ್ ಮಾರವಳ್ಳಿ, ಬಿ.ಸಿ ವೇಣುಗೋಪಾಲ್, ಸುಭಾಷ್ ಚಂದ್ರ ಸ್ಥಾನಿಕ್, ಜಯಣ್ಣ, ಬಿ ಎಲ್ ರಾಜು, ಜಿಯಾವುಲ್ಲ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.