ಸಾರಾಂಶ
ಪುಸ್ತಕ ಓದುವ ಹವ್ಯಾಸದಿಂದ ಚಿಂತನೆಗಳು ಧನಾತ್ಮಕವಾಗಿ ವ್ಯಕ್ತಿತ್ವವೇ ವಿಕಸನವಾಗುತ್ತದೆ ಎಂದು ನಾಲಂದಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಮನ್ಮತ ಡೋಳೆ ಹೇಳಿದರು.
ಔರಾದ್: ಪುಸ್ತಕ ಓದುವ ಹವ್ಯಾಸದಿಂದ ಚಿಂತನೆಗಳು ಧನಾತ್ಮಕವಾಗಿ ವ್ಯಕ್ತಿತ್ವವೇ ವಿಕಸನವಾಗುತ್ತದೆ ಎಂದು ನಾಲಂದಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಮನ್ಮತ ಡೋಳೆ ಹೇಳಿದರು.
ಪಟ್ಟಣದ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ವಿಶ್ವ ಪುಸ್ತಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ಓದುಗನ ಕಲ್ಪನೆಗೆ ಮೀರಿದ ಬುದ್ದಿ ಭಾವಗಳನ್ನು ಬೆಳಸಿ ಓದುವ ಅಭ್ಯಾಸವನ್ನು ವೃದ್ಧಿಸುತ್ತಿವೆ. ಓದುವುದರಿಂದ ಕೇವಲ ಉತ್ತಮ ಶಿಕ್ಷಣ ಒಂದು ನಿರ್ಧಿಷ್ಟ ವಿಷಯದ ಜ್ಞಾನ ಹೊಂದುವುದಲ್ಲದೆ, ನಮ್ಮಲ್ಲಿ ಹಲವು ಕೌಶಲ್ಯ ಮತ್ತು ವಿಮರ್ಶಾತ್ಮಕ ಗುಣಗಳು ವೃದ್ಧಿಸಿ ಮನಸ್ಸು ಸದೃಢಗೊಳ್ಳುತ್ತದೆ ಎಂದರು.ನಿವೃತ್ತ ಉಪನ್ಯಾಸಕ ಕಲ್ಯಾಣರಾವ ಶೆಂಬೆಳ್ಳೆ ಮಾತನಾಡಿ, ಪುಸ್ತಕಗಳು ಯಾವತ್ತಿಗೂ ವಾಸ್ತವ ಸತ್ಯವನ್ನು ತಿಳಿಸುತ್ತವೆ. ಯುವ ಸಮೂಹ ಮೊಬೈಲ್ ವ್ಯಾಮೋಹದಿಂದ ಹೊರಬಂದು ಪುಸ್ತಕ ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕಿದೆ ಎಂದರು.ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ವಿಶ್ವ ಪುಸ್ತಕ ದಿನಾಚರಣೆ ಹಿನ್ನೆಲೆ ಮತ್ತು ಮಹತ್ವ ಕುರಿತು ತಿಳಿಸಿದರು. ಪುಸ್ತಕಗಳ ಓದುವಿಕೆ ಸುಂದರ ಬದುಕು ರೂಪಿಸಬಲ್ಲವು ಎಂಬುದಕ್ಕೆ ಹಲವು ನಿದರ್ಶನಗಳಿವೆ ಎಂದರು.ಈ ಸಂದರ್ಭದಲ್ಲಿ ಪತ್ರಿಸ್ವಾಮಿ ಕಾಲೇಜು ಪ್ರಾಚಾರ್ಯ ಎಸ್.ಕೆ ಅಖೀಲ್, ಉಪನ್ಯಾಸಕ ಅನೀಲ್, ಧನರಾಜ ಮಾನೆ, ಅಮೃತರಾವ ಬಿರಾದಾರ್, ಮಲ್ಲಿಕಾರ್ಜುನ ಟಂಕಸಾಲೆ, ಸಂದೀಪ ಪಾಟೀಲ್, ಅಮರ ಸ್ವಾಮಿ, ಆನಂದ ದ್ಯಾಡೆ, ಶಾಂತಾ ಕನಕೆ, ಕುಮಾರಿ ಸುಷ್ಮಾ ವಿಜಯಕುಮಾರ್ ಸೇರಿದಂತೆ ಇನ್ನಿತರರಿದ್ದರು.