ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ನಿಂತ ನೀರು: ಶಾಸಕ ಆರಗ ಜ್ಞಾನೇಂದ್ರ

| Published : Mar 29 2024, 12:54 AM IST

ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ನಿಂತ ನೀರು: ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಅವಧಿಯಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಅನುದಾನ ಹರಿದು ಬಂದಿದ್ದು, ಈ ಕ್ಷೇತ್ರದಲ್ಲಿ ನಮ್ಮ ಗೆಲುವು ತಡೆಯುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿ ವರಿಷ್ಠರು ಹಾಗೂ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಆಶಯದಂತೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಸೇರಿ ಕಳೆದ ಅವಧಿಯಲ್ಲಿ ಗಳಿಸಿದ ಎರಡಷ್ಟು ಮತಗಳಿಂದ ಗೆಲ್ಲುತ್ತೇವೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕಾಂಗ್ರೆಸ್ ಸರ್ಕಾರ ಆಡಳಿತದ ಕಳೆದ 9 ತಿಂಗಳಲ್ಲಿ ಅಭಿವೃದ್ಧಿ ನಿಂತ ನೀರಾಗಿದ್ದು ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳದ ಬೆಂಬಲದೊಂದಿಗೆ ರಾಜ್ಯದ ಎಲ್ಲಾ 28 ಸ್ಥಾನಗಳ ಗೆಲ್ಲುವ ಪೂರ್ಣ ವಿಶ್ವಾಸ ಹೊಂದಿದ್ದೇವೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಂಟರ ಭವನದಲ್ಲಿ ಗುರುವಾರ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಅವಧಿಯಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಅನುದಾನ ಹರಿದು ಬಂದಿದ್ದು, ಈ ಕ್ಷೇತ್ರದಲ್ಲಿ ನಮ್ಮ ಗೆಲುವು ತಡೆಯುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿ ವರಿಷ್ಠರು ಹಾಗೂ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಆಶಯದಂತೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಸೇರಿ ಕಳೆದ ಅವಧಿಯಲ್ಲಿ ಗಳಿಸಿದ ಎರಡಷ್ಟು ಮತಗಳಿಂದ ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಈ ಎರಡು ಅವಧಿಯಲ್ಲಿ ರೈಲ್ವೆ, ವಿಮಾನ ಸೇರಿ ಉದ್ಯಮ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಲಾಗಿದೆ. ಬರ ನಿರ್ವಹಣೆ ಮಾಡಲಾಗದ ರಾಜ್ಯ ಸರ್ಕಾರ ಕಳೆದ ಚುನಾವಣೆಯಲ್ಲಿ ಜನರಿಗೆ ಆಮಿಷವೊಡ್ಡಿದ ಪರಿಣಾಮ ಬಿಜೆಪಿ, ಜೆಡಿಎಸ್‌ ವಿರೋಧ ಪಕ್ಷದಲ್ಲಿ ಕೂರುವ ಸ್ಥಿತಿ ನಿರ್ಮಾಣವಾಗಿದೆ. ತೆರಿಗೆ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು ಗ್ಯಾರಂಟಿ ಯೋಜನೆಯಲ್ಲೂ ಜನರಿಗೆ ಹಣ ಬರುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮ:

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ಮಾತನಾಡಿ, ಬಿಜೆಪಿ ನೇತೃತ್ವದಲ್ಲಿ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಈ ದೇಶದ ರಕ್ಷಣೆ ಸಾಧ್ಯ. ಅವರ ಸಮರ್ಥ ನಾಯಕತ್ವ ಒಪ್ಪಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಲಿ ಸಂಸದರು ಮತ್ತು ಈ ಕ್ಷೇತ್ರದ ಶಾಸಕರೂ ಅತ್ಯಂತ ಸಮರ್ಥರಾಗಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮದೇ ಆದ ಪ್ರಬಲ ಸಂಘಟನೆಯೂ ಇದ್ದು ದೇಶದ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

ಕೆ.ಎಸ್.ಈಶ್ವರಪ್ಪ ನಿರ್ಧಾರ ಬದಲಿಸುವ ವಿಶ್ವಾಸ:

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಭಾರಿ, ಮಾಜಿ ಶಾಸಕ ರಘುಪತಿ ಭಟ್, ಕೆ.ಎಸ್ ಈಶ್ವರಪ್ಪ ಬಿಜೆಪಿ ಹಿರಿಯ ಮುಖಂಡರಾಗಿದ್ದು ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆಯಲಾರರು ಎಂಬ ವಿಶ್ವಾಸವಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಕಾರ್ಯದರ್ಶಿ ಮೋಹನ ಭಟ್, ಮಧುರಾಜ ಹೆಗ್ಡೆ, ಸಾಲೇಕೊಪ್ಪ ರಾಮಚಂದ್ರ, ಚಂದವಳ್ಳಿ ಸೋಮಶೇಕರ್, ಬೇಗುವಳ್ಳಿ ಸತೀಶ್, ಸಂದೇಶ ಜವಳಿ, ರಕ್ಷಿತ್, ಜೆಡಿಎಸ್ ಮುಖಂಡರಾದ ಗುರುದತ್, ಮೇದೋಳಿಗೆ ರಾಮಸ್ವಾಮಿ, ಶೈಲಾ ನಾಗರಾಜ್ ಇದ್ದರು.

ಸಾಮಾಜಿಕವಾಗಿಯೂ ದೇಶ ಬಲಿಷ್ಠ

ಪ್ರಧಾನಿ ನರೇಂದ್ರ ಮೋದಿಯವರ ಎರಡು ಅವಧಿಯ ಆಡಳಿತದಲ್ಲಿ ದೇಶ ಜಗತ್ತಿನ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ. ವಿಶ್ವದ ಅತಿ ದೊಡ್ಡ ಸೈನ್ಯದ ಶಕ್ತಿಯನ್ನೂ ಹೊಂದಿ ಸುರಕ್ಷಿತವಾಗಿದ್ದು, ವಿಚ್ಛಿದ್ರಕಾರಕ ಶಕ್ತಿಗಳ ನಿರ್ನಾಮ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾಮಾಜಿಕವಾಗಿಯೂ ಬಲಿಷ್ಠಗೊಂಡಿರುವ ಭಾರತದಲ್ಲಿ 20 ಕೋಟಿ ಕುಟುಂಬಗಳ ಬಡತನದ ರೇಖೆಯಿಂದ ಮೇಲೆತ್ತಲಾಗಿದೆ.

ಆರಗ ಜ್ಞಾನೇಂದ್ರ, ಶಾಸಕ