ರಾಜ್ಯದಲ್ಲಿ ಬರ ಘೋಷಣೆ ಹಾಗೂ ಪರಿಹಾರ ವಿತರಣೆ ವಿಷಯದಲ್ಲಿ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ.
ಹಾನಗಲ್ಲ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರು- ಸಂಸದರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ತಾಲೂಕಿನ ಹರವಿ ಗ್ರಾಮದಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಜ್ಯದಲ್ಲಿ ಬರ ಘೋಷಣೆ ಹಾಗೂ ಪರಿಹಾರ ವಿತರಣೆ ವಿಷಯದಲ್ಲಿ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ. ಕೃಷಿ ಹಾಗೂ ಬೆಳೆ ನಷ್ಟದಂಥ ತುರ್ತು ಸಂದರ್ಭಗಳಲ್ಲಿ ರೈತರಿಗೆ ಕೂಡಲೇ ಸ್ಪಂದಿಸಿ, ರಾಜಕೀಯವನ್ನು ಬದಿಗಿಟ್ಟು ತ್ವರಿತವಾಗಿ ಪರಿಹಾರ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ನೂತನವಾಗಿ ಉದ್ಘಾಟನೆಗೊಂಡಿರುವ ಆಯುಷ್ಮಾನ್ ಆರೋಗ್ಯ ಕೇಂದ್ರವು ಸ್ಥಳೀಯ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಲಿ ಎಂದು ಹಾರೈಸಿದರು.ಮನುಷ್ಯನಿಗೆ ಆರೋಗ್ಯ ಅತ್ಯಂತ ಅಗ್ರಗಣ್ಯವಾದದ್ದು. ಬದುಕಿನಲ್ಲಿ ಎಷ್ಟೇ ಭಾಗ್ಯಗಳಿದ್ದರೂ ಆರೋಗ್ಯವಿಲ್ಲದಿದ್ದರೆ ಜೀವನ ಬಹಳ ಕಷ್ಟವಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಡವರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ೨೦೧೭ರಲ್ಲಿ ಆರಂಭವಾದ ಆಯುಷ್ಮಾನ್ ಯೋಜನೆಯಡಿ ಬಡವರಿಗೆ ₹೫ ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಸಿಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ೨ ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗಿದ್ದು, ಸುಮಾರು ೯೦ ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇರುವುದು ದೊಡ್ಡ ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದ ಬೊಮ್ಮಾಯಿ, ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯರು ಕರ್ನಾಟಕದಲ್ಲಿದ್ದರೂ ಗ್ರಾಮೀಣ ಭಾಗಕ್ಕೆ ವೈದ್ಯರ ಕೊರತೆ ನೀಗಿಸುವುದು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಮಾತನಾಡಿ, ಕೊಪ್ಪರಸಿಕೊಪ್ಪ, ಯಳವಟ್ಟಿ, ನಿಟಗಿನಕೊಪ್ಪ, ಕರಗುದರಿ, ಅಕ್ಕಿಆಲೂರು, ನೀರಲಗಿ ಮ ಆಡೂರು ಗ್ರಾಮಗಳಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ. ತಾಲೂಕಿನ ಗ್ರಾಮೀಣ ಭಾಗದ ಜನತೆಗೆ ತ್ವರಿತಗತಿಯಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಹರವಿ ಗ್ರಾಮದಲ್ಲಿ ಆರೋಗ್ಯ ಮಂದಿರ ನಿರ್ಮಾಣವಾಗಿರುವುದರಿಂದ ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಮಂದಿರಕ್ಕೆ ಅಗತ್ಯ ರಸ್ತೆ ನಿರ್ಮಾಣಕ್ಕೆ ₹೨೫ ಲಕ್ಷ ಅನುದಾನ ಸಹ ಬಿಡುಗಡೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಟಾಕನಗೌಡ ಪಾಟೀಲ, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ ಸೇರಿದಂತೆ ಭೂದಾನಿಗಳಾದ ಗದಿಗೆಪ್ಪ ಅಂಗಡಿ ಕುಟುಂಬಸ್ಥರು, ಕಮಲವ್ವ ತಳವಾರ, ಪುಟ್ಟಕ್ಕ ತಳವಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಗದೀಶ್ ಪಾಟೀಲ, ಟಿಎಚ್‌ಒ ಡಾ. ಶಿವಾನಂದ ಪೂಜಾರ ಇದ್ದರು.