ಚಿಕ್ಕತಿರುಪತಿಯಲ್ಲಿ ಅಭಿವೃದ್ಧಿ ಪರ್ವ: ಶಾಸಕ

| Published : Nov 30 2024, 12:45 AM IST

ಸಾರಾಂಶ

ಸರ್ಕಾರದಿಂದ ಮಂಜೂರಾತಿ ಪಡೆದು ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಿಸಲಾಗುವುದು. ಭಕ್ತಾಧಿಗಳು ನೀಡಿರುವ ಹುಂಡಿ ಹಣದಿಂದ ನಡೆಯುವ ಈ ಕಾಮಗಾರಿ ಜೊತೆಯಲ್ಲಿ ದೇವಾಲಯದಲ್ಲಿ ಅವಶ್ಯವಾಗಿರುವ ಯಾತ್ರಿಕರಿಗಾಗಿ ಮೂಲಭೂತ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ೧೮ ಕೋಟಿ ರು. ವೆಚ್ಚದ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದ್ದು, ಇನ್ನು ಮುಂದೆ ಚಿಕ್ಕತಿರುಪತಿಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.

ಅವರು ತಾಲೂಕಿನ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಇಲಾಖೆ ಅಧಿಕಾರಿಗಳೊಡನೆ ನಡೆಸಿದ ಅಭಿವೃದ್ಧಿ ಪೂರ್ವಭಾವಿ ಸಭೆಯ ನಂತರ ಶಾಸಕ ಮಾತನಾಡಿದರು.

₹7 ಕೋಟೆ ವೆಚ್ಚದಲ್ಲಿ ಕಾಂಪೌಂಡ್‌

ದೇವಾಲಯದ ಪ್ರಾಕಾರದ ಕಾಂಪೌಂಡನ್ನು ಸುಸಜ್ಜಿತವಾಗಿ ನಿರ್ಮಿಸಲು 7 ಕೋಟಿಯ ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳ ಮುಖೇನ ಸರ್ಕಾರದ ಮಂಜೂರಾತಿಗೆ ಕಳುಹಿಸಲಾಗಿದೆ. ಸರ್ಕಾರದಿಂದ ಮಂಜೂರಾತಿ ಪಡೆದು ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಿಸಲಾಗುವುದು. ಭಕ್ತಾಧಿಗಳು ನೀಡಿರುವ ಹುಂಡಿ ಹಣದಿಂದ ನಡೆಯುವ ಈ ಕಾಮಗಾರಿ ಜೊತೆಯಲ್ಲಿ ದೇವಾಲಯದಲ್ಲಿ ಅವಶ್ಯವಾಗಿರುವ ಯಾತ್ರಿಕರಿಗಾಗಿ ಮೂಲಭೂತ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕಾಮಗಾರಿ ಚಾಲನೆಗೆ ಸಿಎಂ

ಮುಂದಿನ ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲೂರು ಪಟ್ಟಣದಲ್ಲಿ 2200 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಅಂದೇ ಇಲ್ಲಿ ಪೂರ್ಣಗೊಂಡಿರುವ 108 ಅಡಿ ಎತ್ತರದ ದೇವಾಲಯದ ಗೋಪುರವನ್ನು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದರು.

ತಹಸೀಲ್ದಾರ್‌ ಕೆ.ರಮೇಶ್‌ ,ಲೋಕೋಪಯೋಗಿ ಇಲಾಖೆ ಇ.ಇ. ರಾಮಮೂರ್ತಿ, ಎ.ಇ.ಇ.ರಾಜಗೋಪಾಲ್‌, ದೇವಾಲಯದ ನಿರ್ವಹಣಾಧಿಕಾರಿ ಸೆಲ್ವಂಮಣಿ, ರಮೇಶ್‌ ,ಪಂಚಾಯ್ತಿ ಅಧ್ಯಕ್ಷ ರಾಂಪ್ರಸಾದ್‌ ,ವೀರಭದ್ರಸ್ವಾಮಿ, ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗೇಶ್‌, ವೆಂಕಟರಮಣ ಇನ್ನಿತರರು ಇದ್ದರು.