ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಶಾಲಾ, ಕಾಲೇಜು, 50 ಕೆರೆಗಳಿಗೆ ಕೃಷ್ಣಾ ನೀರು ತುಂಬಿಸುವ ಯೋಜನೆ ಹೀಗೆ ಅಭಿವೃದ್ಧಿಯೇ ಜರುಗುತ್ತಿದೆ. ಸಿಎಂ ಕ್ಷೇತ್ರಕ್ಕಿಂತ ಹೆಚ್ಚು ಅಭಿವೃದ್ಧಿ ಆಗಿದೆ
ಕುಕನೂರು: ಸಿಎಂ ಕ್ಷೇತ್ರದಲ್ಲೂ ಸಹ ಆಗದಷ್ಟು ಅಭಿವೃದ್ಧಿ ಕಾರ್ಯ ಯಲಬುರ್ಗಾ ಕ್ಷೇತ್ರದಲ್ಲಿ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಮಂಡ್ಲಿಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಹೆಚ್ಚು ಆಗುತ್ತಿವೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಶಾಲಾ, ಕಾಲೇಜು, 50 ಕೆರೆಗಳಿಗೆ ಕೃಷ್ಣಾ ನೀರು ತುಂಬಿಸುವ ಯೋಜನೆ ಹೀಗೆ ಅಭಿವೃದ್ಧಿಯೇ ಜರುಗುತ್ತಿದೆ. ಸಿಎಂ ಕ್ಷೇತ್ರಕ್ಕಿಂತ ಹೆಚ್ಚು ಅಭಿವೃದ್ಧಿ ಆಗಿದೆ. ನನ್ನ ವಿರುದ್ಧ ನಿಂತಿದ್ದ ಅಭ್ಯರ್ಥಿ ಗ್ರಾಮದಲ್ಲಿಯೇ ಈ ಅವಧಿಯಲ್ಲಿಯೇ ನಾನು ಪ್ರಥಮ ಬಾರಿಗೆ ಪಿಯುಸಿ ಕಾಲೇಜು ಆರಂಭಿಸಿದ್ದೇನೆ. ಜ. 19ಕ್ಕೆ ಕಾಲೇಜಿನ ಕಟ್ಟಡ ಉದ್ಘಾಟನೆ ಸಹ ಜರುಗುತ್ತಿದೆ. ರಾಜ್ಯದ ಗ್ಯಾರಂಟಿ ಯೋಜನೆ ನೆರವಾಗಿ ಜನರಿಗೆ ತಲುಪಿವೆ. ಈ ಹಿಂದೆ ದೆಹಲಿಯಲ್ಲಿ ಆಗಿನ ಸಿಎಂ ಅರವಿಂದ ಕ್ರೆಜಿವಾಲ್ ಮಾತ್ರ ಉಚಿತ ಬಸ್ ಪ್ರಯಾಣ ಮಾಡಿದ್ದರು. ಆದರೆ ರಾಜ್ಯದಲ್ಲಿ ಬರೋಬ್ಬರಿ 680 ಕೋಟಿ ಮಹಿಳೆಯರು ಪ್ರಯಾಣಿಸಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಸಿಎಂ ಸಿದ್ದರಾಮಯ್ಯ ಜನವಿರೋಧಿ ಕೆಲಸ ಎಂದಿಗೂ ಮಾಡುವುದಿಲ್ಲ. ಹಾಗಾಗಿ ರಾಜ್ಯ ಇಡೀ ರಾಷ್ಟ್ರದಲ್ಲಿ ಆರ್ಥಿಕ ಶಿಸ್ತಿನಿಂದ ಕೂಡಿದೆ ಎಂದರು.
ನಾನೊಬ್ಬನೇ ಅಧಿಕಾರೇತರ ಸಲಹೆಗಾರ:ಸಿಎಂ ಸಿದ್ದರಾಮಯ್ಯ ನನ್ನನ್ನು ಆರ್ಥಿಕ ಮಂತ್ರಿ ಮಾಡದಿದ್ದರೂ ಸಹ ನನ್ನನ್ನೂ ಆರ್ಥಿಕ ಸಲಹೆಗಾರರಾಗಿ ತೆಗೆದುಕೊಂಡಿದ್ದಾರೆ. ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಇತರೆ ಸಿಎಂಗಳಿಗೆ ಅಧಿಕಾರಿಗಳು ಆರ್ಥಿಕ ಸಲಹೆಗಾರರಾಗಿ ಇರುತ್ತಿದ್ದರು. ಅಧಿಕಾರೇತರ ಆರ್ಥಿಕ ಸಲಹೆಗಾರರಲ್ಲಿ ನಾನೇ ಪ್ರಥಮ. ಈ ಸಲದ ಬಜೆಟ್ ₹4 ಲಕ್ಷದ 35 ಸಾವಿರ ಕೋಟಿ ತಲುಪಬಹುದು ಎಂದರು.ಶರಣ ತತ್ವ ಪಾಲನೆ: ನಾನು ದೇವರನ್ನು ನಂಬುವುದಿಲ್ಲ. ಆದರೆ ಶರಣ ತತ್ವ ಪಾಲನೆ ಮಾಡುತ್ತೇನೆ. ಜನರ ಕಲ್ಯಾಣವೇ ನನ್ನ ನಂಬಿಕೆ. ಆ ನಿಟ್ಟಿನಲ್ಲಿ ಕೊಪ್ಪಳದ ಗವಿಶ್ರೀ, ಸುತ್ತೂರು ಶ್ರೀ, ಗದಗಿನ ತೋಂಟದಾರ್ಯ ಮಠದ ಶ್ರೀಗಳು ಕಾರ್ಯ ಮಾಡುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ಜಿಲ್ಲೆಗೆ ಕಾರ್ಡಿಯಾಲಾಜಿ, ನ್ಯುರಾಲಜಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ರೈತರ ಬೆಳೆಗಳ ಸಂಸ್ಕರಣ ಘಟಕ, ಬೆಳೆಗಳಿಗೆ ಹೊಸ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳ ಅವಶ್ಯಕತೆ ಇದ್ದು, ಅವುಗಳನ್ನು ಶಾಸಕ ರಾಯರಡ್ಡಿ ಬಜೆಟಿನಲ್ಲಿ ಜಿಲ್ಲೆಗೆ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು.ಗದಗಿನ ತೋಂಟದಾರ್ಯಮಠದ ತೊಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, 224 ಮತ ಕ್ಷೇತ್ರದಲ್ಲಿ ಆಗದಷ್ಟು ಕಾರ್ಯ ಇಲ್ಲಿನ ಶಾಸಕರು ಮಾಡುತ್ತಿದ್ದಾರೆ.ಅನುದಾನ ಬಳಸಿಕೊಳ್ಳದ ಶಾಸಕರ ಮಧ್ಯೆ ಬಸವರಾಜ ರಾಯರಡ್ಡಿ ಜನರ ಕಲ್ಯಾಣದಲ್ಲಿ ದೇವರನ್ನು ಕಾಣುತ್ತಿದ್ದಾರೆ. ಶೈಕ್ಷಣೀಕವಾಗಿ ಯಲಬುರ್ಗಾ ಕ್ಷೇತ್ರಕ್ಕೆ ಪ್ರಾಶಸ್ಯ ನೀಡಿದ್ದಾರೆ ಎಂದರು.
ಜಿಪಂ ಸಿಇಓ ವರ್ಣೀತ ನೇಗಿ, ಮಂಡ್ಲಿಗೇರಿ ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಸಿದ್ಧನಗೌಡ, ಇಟಗಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಭಜಂತ್ರಿ, ತಾಪಂ ಇಒ ಸಂತೋಷ ಬಿರಾದಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಪ್ರಭಾರಿ ಬಿಇಒ ಅಶೋಕಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಅಶೋಕ ತೋಟದ, ಸಂಗಮೇಶ ಗುತ್ತಿ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಗ್ರಾರಂಟಿ ಸಮಿತಿ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್,ಮಂಜುನಾಥ್ ಕಡೇಮನಿ, ಮಂಜುನಾಥ್ ಸೋಂಪೂರ, ಕೆರಿಬಸಪ್ಪ ನಿಡಗುಂದಿ, ರಾಮು ಕೌದಿ, ಮಹೇಶ ದೊಡ್ಮನಿ, ರಫೀ ಮಂಡ್ಲಿಗೇರಿ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಕೆಎಂಎಫ್ ನಿರ್ದೇಶಕ ಪಯ್ಯಸ್ವಾಮಿ, ಸಂತೋಷ ಬೆಣಕಲ್, ವೈದ್ಯ ಜಂಬಣ್ಣ, ಪಿಡಬ್ಯೂಡಿ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ, ಕೆ.ಎಸ್.ಆರ್.ಟಿ.ಸಿ ವಿಭಾಗಾಧಿಕಾರಿ ಶ್ರೀನಿವಾಸ, ಪಂಚಾಯತ್ ರಾಜ್ಯ ಇಲಾಖೆ ಇಂಜಿನಿಯರ್ ರಾಜಶೇಖರ್ ಮಳಿಮಠ, ಕೆಬಿಜೆಎನ್ ಎಲ್ ಅಧಿಕಾರಿ ಚನ್ನಪ್ಪ, ಶಶಿಧರ ಸಕ್ರಿ ಇತರರಿದ್ದರು.