ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಯೇ ಮರೀಚಿಕೆ

| Published : Nov 21 2025, 02:00 AM IST

ಸಾರಾಂಶ

ನಗರದಲ್ಲಿ ಸ್ಮಾರ್ಟ್‌ ಆಗಬೇಕಿದ್ದ ರಸ್ತೆಗಳು ಗುಂಡಿಮಯವಾಗಿವೆ. ಪೊಲೀಸರು ಹಲ್ಲೆ ಮಾಡುವವರು, ಕಳ್ಳರನ್ನು ಬಿಟ್ಟು ವಾಹನ ಸವಾರನನ್ನು ಹಿಡಿದು ದಂಡ ಹಾಕುವುದರಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಜನರ ಸಮಸ್ಯೆ ಕೇಳದವರಂತಾಗಿದ್ದಾರೆ. ಜಿಲ್ಲೆಯ ಮಂತ್ರಿಗಳಿಗೂ ಈ ಜಿಲ್ಲೆಯ ಉಸ್ತುವಾರಿ ಬೇಡವಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್‌ ಆಗಬೇಕಿದ್ದ ರಸ್ತೆಗಳು ಗುಂಡಿಮಯವಾಗಿವೆ. ಪೊಲೀಸರು ಹಲ್ಲೆ ಮಾಡುವವರು, ಕಳ್ಳರನ್ನು ಬಿಟ್ಟು ವಾಹನ ಸವಾರನನ್ನು ಹಿಡಿದು ದಂಡ ಹಾಕುವುದರಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಜನರ ಸಮಸ್ಯೆ ಕೇಳದವರಂತಾಗಿದ್ದಾರೆ. ಜಿಲ್ಲೆಯ ಮಂತ್ರಿಗಳಿಗೂ ಈ ಜಿಲ್ಲೆಯ ಉಸ್ತುವಾರಿ ಬೇಡವಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಅನೇಕ ರಸ್ತೆಗಳು ಗುಂಡಿಗಳಿಂದ ತುಂಬಿವೆ, ಗುಂಡಿ ತಪ್ಪಿಸಲು ಹೋಗಿ ಅನೇಕರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಪೊಲೀಸರು ವಾಹನ ಸವಾರರನ್ನು ಕಳ್ಳರಂತೆ ಹಿಡಿದು ದಂಡ ವಸೂಲಿ ಮಾಡಿರುವ ಹಣದಲ್ಲೇ ಈ ಗುಂಡಿಗಳನ್ನು ಮುಚ್ಚಬಹುದು ಅದೂ ಆಗುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ದೂರಿದರು.

ನಗರದಲ್ಲಿ 24 x 4 ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ ಮೀತಿಮೀರಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡುವಲ್ಲಿ ಸಂಪೂರ್ಣವಿಫಲವಾಗಿದೆ. ಸೊರಬದಲ್ಲಿ ಜಿಲ್ಲಾ ಮಂತ್ರಿಗಳು 700 ಕೋಟಿ ರು.ಗಳ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು, ನೂರಾರು ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ ಎಂದು ಆಪಾದಿಸಿದರು.

ಡಿ.ಸಿ.ಕಚೇರಿ, ಎ.ಸಿ. ಕಚೇರಿ, ಪಾಲಿಕೆ ಅಧಿಕಾರಿ ಸಿಬ್ಬಂದಿ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮಾತ್ರ ಫೈಲುಗಳ ವಿಲೇವಾರಿ ಮಾಡುತ್ತಿದ್ದಾರೆ. ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದು, ನಾಗರೀಕರ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ದೂರಿದರು.

ಶ್ರೇಷ್ಠ ನಾಯಕ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಎಡಗಣ್ಣನ್ನು ಎತ್ತಿಕೂಡ ನೋಡುತ್ತಿಲ್ಲ. ಪ್ರಮುಖ ಬಡಾವಣೆಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ. ಎಲ್ಲ ರಸ್ತೆಗಳು ನೀರಿಗಾಗಿ ಹಾಳಾಗಿದೆ. ಜನರ ಬಳಿ ಕಟ್ಟಿಸಿಕೊಂಡ ದುಡ್ಡಿನಲ್ಲೇ ಡಾಂಬರೀಕರಣ ಮಾಡಬಹುದಿತ್ತು. ಮೊದಲು ಸಚಿವರು ನಗರದ ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಮಾಡಲಿ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಕಾಮಗಾರಿ ಆಗಿಲ್ಲ ಎಂದರು.

ಯುಜಿಡಿ, ಬಾಕ್ಸ್ ಡ್ರೈನೇಜ್ ಸಮಸ್ಯೆ ಕೂಡ ಗಂಭೀರವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರೌಡಿಸಂ, ಗಾಂಜಾ, ಓಸಿ ಎಲ್ಲೆಮೀರಿದೆ. ಟ್ರಾಫಿಕ್ ಪೊಲೀಸರು ದಂಡ ಹಾಕುವುದರಲ್ಲಿ ರಾಜ್ಯದಲ್ಲೇ ನಂಬರ್ ಒನ್ ಆಗಿದ್ದು, ಮರದ ಮೂಲೆಯಲ್ಲಿ ಅಡಗಿಕೊಂಡು ದರೋಡೆಕೋರರನ್ನು ಹಿಡಿದ ಹಾಗೆ ಅಮಾಯಕರನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಎಷ್ಟಿದೆಯೋ ಅಷ್ಟು ವಸೂಲಿ ಕೂಡ ಮಾಡುತ್ತಿದ್ದಾರೆ ಇದು ನಿಲ್ಲಬೇಕು. ಈ ಸಚಿವರು ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದು ಕೂಡಲೇ ಅನುದಾನ ತಂದು ನಗರವನ್ನು ಗುಂಡಿಭಾಗ್ಯಗಳಿಂದ ಕಾಪಾಡಿ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ದೀಪಕ್‌ಸಿಂಗ್, ಎಚ್.ಎಂ. ಸಂಗಯ್ಯ, ಶ್ಯಾಂ, ಗಂಧದಮನೆ ನರಸಿಂಹ, ಬೊಮ್ಮನಕಟ್ಟೆ ಮಂಜುನಾಥ್, ರಮೇಶ್‌ನಾಯಕ್, ವಿಜಯಕುಮಾರ್ ಮತ್ತಿತರರಿದ್ದರು.