ಗ್ರಾಮದಲ್ಲಿ ಒಗ್ಗಟ್ಟಿದ್ದರೆ ಅಭಿವೃದ್ಧಿ ಸಾಧ್ಯ: ಶಾಸಕ ಎಸ್. ಆರ್. ಶ್ರೀನಿವಾಸ್

| Published : Feb 09 2025, 01:18 AM IST

ಗ್ರಾಮದಲ್ಲಿ ಒಗ್ಗಟ್ಟಿದ್ದರೆ ಅಭಿವೃದ್ಧಿ ಸಾಧ್ಯ: ಶಾಸಕ ಎಸ್. ಆರ್. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಸ್ಥರು 1.5 ಕೋಟಿ ವೆಚ್ಚದಲ್ಲಿ ಇಷ್ಟು ದೊಡ್ಡದಾದ ದೇವಾಲಯ ನಿರ್ಮಾಣ ಮಾಡಿರುವುದು ನಿಜವಾಗಿಯೂ ಮಾದರಿ ಎನಿಸುತ್ತದೆ, ಸಮುದಾಯ ಭವನ ನಿರ್ಮಿಸಲು ನನ್ನಿಂದ ಎಲ್ಲ ಸಹಕಾರ ಹಾಗೂ ಸರ್ಕಾರರಿಂದ ಅನುದಾನವನ್ನೂ ನೀಡುತ್ತೇನೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಗ್ರಾಮಸ್ಥರೆಲ್ಲರೂ ಸೇರಿ ಜೀರ್ಣೋದ್ಧಾರ ಮಾಡಿರುವುದು ಖುಷಿ ನೀಡಿದೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಕಡಬ ಹೋಬಳಿಯ ಅಡಗೊಂಡನಹಳ್ಳಿ ಗ್ರಾಮದ ಶ್ರೀ ಉದ್ಭವ ರಂಗನಾಥಸ್ವಾಮಿ ಹಾಗೂ ಆಂಜನೇಯಸ್ವಾಮಿ ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾನು ಇಲ್ಲಿಗೆ 20 ವರ್ಷಗಳ ಹಿಂದೆ ಬಂದಾಗ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಆದರೆ ಈಗ ಅಭಿವೃದ್ಧಿಯಲ್ಲಿ ಇಡೀ ಗ್ರಾಮ ಮಾದರಿಯಾಗಿರುವುದು ನೋಡಿದಾಗ ಗ್ರಾಮದ ಒಗ್ಗಟ್ಟು ಎಷ್ಟಿದೆ ಎಂಬುದು ತಿಳಿಯುತ್ತದೆ. ಒಂದು ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ಒಗ್ಗಟ್ಟು ಇರಬೇಕು ಎಂದರೆ ಯಾವುದೇ ಕಾರಣಕ್ಕೂ ರಾಜಕೀಯದವರ ಮಾತನ್ನು ಕೇಳದಿರಿ, ರಾಜಕೀಯದವರು ರಾಜಕೀಯಕ್ಕೋಸ್ಕರ ಇಡೀ ಊರನ್ನೇ ಒಡೆಯುತ್ತಾರೆ, ಗ್ರಾಮಸ್ಥರು 1.5 ಕೋಟಿ ವೆಚ್ಚದಲ್ಲಿ ಇಷ್ಟು ದೊಡ್ಡದಾದ ದೇವಾಲಯ ನಿರ್ಮಾಣ ಮಾಡಿರುವುದು ನಿಜವಾಗಿಯೂ ಮಾದರಿ ಎನಿಸುತ್ತದೆ, ಸಮುದಾಯ ಭವನ ನಿರ್ಮಿಸಲು ನನ್ನಿಂದ ಎಲ್ಲ ಸಹಕಾರ ಹಾಗೂ ಸರ್ಕಾರರಿಂದ ಅನುದಾನವನ್ನೂ ನೀಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್‍ಡಿ ದಿಲೀಪ್ ಕುಮಾರ್ ಮಾತನಾಡಿ, ಇಂತಹ ಧಾರ್ಮಿಕ ಸಮಾರಂಭಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆ ತರಬೇಕು, ಇದರಿಂದ ಅವರ ಮನದಲ್ಲಿ ಸಂಸ್ಕೃತಿ, ಸಂಸ್ಕಾರ, ಸಂಬಂಧಗಳ ಅರಿವು ಮೂಡುತ್ತದೆ. ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಮಕ್ಕಳು ದಾರಿತಪ್ಪುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದಷ್ಟು ನಿಮ್ಮ ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ದೂರವಿಟ್ಟು ಕೈಗೆ ಪುಸ್ತಕವನ್ನು ನೀಡುವಂತಹ ಕೆಲಸ ಮಾಡಿ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ದೇವಾಲಯಗಳು ಶಾಂತಿಯ ತವರೂರಾಗಿವೆ, ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣವಾದಾಗ ಒಗ್ಗಟ್ಟಿನ ಮಂತ್ರ ಜಪಿಸಬಹುದು. ಇಲ್ಲಿ ಯುವಕರೇ ಅತಿ ಹೆಚ್ಚು ಕಾಣಿಸುತ್ತಿದ್ದು ಯುವಕರೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದರ ಬಗ್ಗೆ ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿಮಠದ ನಂಜಾವಧೂತ ಮಹಾಸ್ವಾಮೀಜಿ, ಬೆಟ್ಟದ ಹಳ್ಳಿಯ ಚಂದ್ರಶೇಖರ ಮಹಾಸ್ವಾಮೀಜಿ , ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಎಸ್ಎಸ್ಎನ್ ಅಧ್ಯಕ್ಷ‌ ಸುರೇಶ್ ಗೌಡ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಲ್ಪನಾ ಉಮೇಶ್, ಮುಖಂಡರಾದ ಕೊಪ್ಪದೇವರಾಜು, ಬಾಲಕೃಷ್ಣ, ದಯಾನಂದ, ಗವಿರಂಗಯ್ಯ, ಗಿರಿಯಪ್ಪ, ದೇವಸ್ಥಾನದ ಶಿಲ್ಪಿ ಮಹಾಲಿಂಗಯ್ಯ, ಮಂಜುಳ ಸೇರಿ ಭಕ್ತರು ಹಾಜರಿದ್ದರು.