ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಪಿ.ಎಂ. ರವಿ

| Published : May 27 2024, 01:00 AM IST

ಸಾರಾಂಶ

ಕುಸುಬೂರಿನಲ್ಲಿ ಮೊಗೇರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮೊಗೇರ ಸೇವಾ ಸಮಾಜದ ಜಿಲ್ಲಾ ಗೌರವ ಸಲಹೆಗಾರ ಪಿ.ಎಂ. ರವಿ ಈ ಸಂದರ್ಭ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮೊಗೇರ ಸೇವಾ ಸಮಾಜದ ಜಿಲ್ಲಾ ಗೌರವ ಸಲಹೆಗಾರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಪಿ.ಎಂ. ರವಿ ಹೇಳಿದರು.

ಸೋಮವಾರಪೇಟೆಯ ಬಜೆಗುಂಡಿ ಮೊಗೇರ ಸೇವಾ ಸಮಾಜ ಮತ್ತು ಕುಸುಬೂರು ಮೊಗೇರ ಗ್ರಾಮ ಸಮಿತಿ ವತಿಯಿಂದ ಕುಸುಬೂರಿನಲ್ಲಿ ಮೊಗೇರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜವು ಬಲಿಷ್ಠವಾಗಬೇಕಾದರೆ ಶಿಕ್ಷಣವು ಪ್ರಮುಖವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವಲ್ಲಿ ಶ್ರಮವಹಿಸಬೇಕು. ಪ್ರಸ್ತುತ ದಿನಗಳಲ್ಲಿ ಮೊಗೇರ ಸಮುದಾಯದವರು ಎಲ್ಲ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದು, ಸಮಾಜದ ಅಭಿವೃದ್ಧಿಗೆ ಎಲ್ಲರ ಕೊಡುಗೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಕೈಜೋಡಿಸುವಂತೆ ಮನವಿ ಮಾಡಿದರು.

ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ ಎಂಬ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಗ್ರಾಮ ಶಾಖೆ ಅಧ್ಯಕ್ಷ ಎಚ್.ಬಿ.ರಾಮಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.

ಮೊಗೇರ ಗ್ರಾಮ ಶಾಖೆಯಿಂದ ಕಳೆದ ಒಂಬತ್ತು ವರ್ಷದಿಂದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಎಲ್ಲರೂ ತಮ್ಮ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಮೊಗೇರ ಸೇವಾ ಸಮಾಜದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ.ಕೆ.ವಸಂತ, ಗ್ರಾಮದ ಶಾಖೆಯ ಉಪಾಧ್ಯಕ್ಷ ತನಿಯಪ್ಪ, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಸುರೇಶ್ ಕುಸುಬೂರು, ಸಮಾಜದ ಹಿರಿಯ ಸದಸ್ಯ ಕುಮಾರ ಸೇರಿದಂತೆ ಅನೇಕರು ಹಾಜರಿದ್ದರು.

ಸದಸ್ಯರಾದ ದಿನೇಶ್ ಕುಸುಬೂರು ನಿರೂಪಿಸಿ, ಸ್ವಾಗತಿಸಿದರು. ಶಿವಕುಮಾರ್ ಮಾಸ್ಟರ್ ವಂದಿಸಿದರು.