ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ

| Published : Apr 21 2024, 02:23 AM IST

ಸಾರಾಂಶ

60 ವರ್ಷದಲ್ಲಿ ಕಾಣದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಕಳೆದ 10 ವರ್ಷದಲ್ಲಿ ಪ್ರಧಾನಿ ಮೋದಿ ಆಡಳಿತದಲ್ಲಿ ಆಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಹೊಳಲ್ಕೆರೆ: 60 ವರ್ಷದಲ್ಲಿ ಕಾಣದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಕಳೆದ 10 ವರ್ಷದಲ್ಲಿ ಪ್ರಧಾನಿ ಮೋದಿ ಆಡಳಿತದಲ್ಲಿ ಆಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಹೊಳಲ್ಕೆರೆ ಕ್ಷೇತ್ರದ ಎಚ್.ಡಿ.ಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿ ಎಚ್.ಡಿ.ಪುರದಲ್ಲಿ ಅಭ್ಯರ್ಥಿ ಬೆಂಬಲಿಸಿ ಗೆಲ್ಲಿಸುವಂತೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಅಭಿವೃದ್ಧಿಗಷ್ಟೆ 60 ವರ್ಷ ಕೆಲಸ ಮಾಡಿದೆ. ಎನ್‌ಡಿಎ ಕೂಟದ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಅಭಿವೃದ್ಧಿಗೆ ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್ ಘೋಷಣೆಯಡಿಯಲ್ಲಿ ಕಾರ್ಯ ಮಾಡಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಂತರ ಈಗ ಹತ್ತು ವರ್ಷಗಳ ಕಾಲ ಪ್ರಧಾನಿಗಳಾಗಿದ್ದಾಗ ದೇಶದ ಪ್ರಧಾನ ಸೇವಕರಾಗಿ ಎಲ್ಲ ಸಂಸದರನ್ನು ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಂಡು ಕೆಲಸ ಮಾಡುತ್ತಿದ್ದಾರೆ. ರಜೆ ತೆಗೆದುಕೊಳ್ಳದೆ ಹಗಲಿರುಳು ಬಡವರ ದೀನ ದಲಿತರ ಪ್ರಗತಿಗಾಗಿ ದುಡಿಯುತ್ತಿದ್ದಾರೆ. ಕಾಯಕವೇ ಕೈಲಾಸ ಎಂಬ ನುಡಿಗೆ ಅನ್ವರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ದೇಶದ ಮೂಲೆಮೂಲೆಗಳಲ್ಲಿ ಹೆಚ್ಚಾಗಿತ್ತು. ಈಗ ಭಯೋತ್ಪಾದನೆ ಎಂಬುದು ಮೂಲೆಗುಂಪು ಮಾಡಿದ್ದಾರೆ ಹೆಮ್ಮೆಯ ಪ್ರಧಾನಿ ಮೋದಿ. ದೇಶದ ರಕ್ಷಣೆ ಜೊತೆ ಸರ್ವ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಪಂಚದ ಪ್ರಬಲ ನಾಯಕ ಮೋದಿ 3ನೇ ಅವಧಿ ಆಡಳಿತದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ತಾವು ಗೆಲ್ಲಿಸಬೇಕು ಎಂದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹೊಳಲ್ಕೆರೆ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಬಿಜೆಪಿ ಶಾಸಕನಾಗಿ ಶ್ರಮಿಸುತ್ತಿದ್ದೇನೆ. ವಿದ್ಯುತ್ ಅಭಾವ ಹೋಗಲಾಡಿಸಿ ಪ್ರತಿ ಹಳ್ಳಿಯ ರೈತರಿಗೂ ಪ್ರತಿ ಮನೆಗೂ ನಿರಂತರ ವಿದ್ಯುತ್ ಸಿಗುವಂತೆ ಮಾಡಿರುತ್ತೇನೆ. ರಸ್ತೆಗಳ ಅಭಿವೃದ್ಧಿ ಮಾಡಿದ್ದೇನೆ. ನಮ್ಮ ಎಲ್ಲ ಜನಪರ ಕೆಲಸಗಳಿಗೆ ಸ್ಪೂರ್ತಿ ಪ್ರಧಾನಿಗಳಾದ ಮೋದಿ. ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಿ ಭಾರತ ದೇಶ ವಿಶ್ವ ಗುರುವಾಗಿಸಲು ನಾವೆಲ್ಲ ಶ್ರಮಿಸಬೇಕು. ಪ್ರಪಂಚವೇ ಕೊರೋನಾ ಸಂದರ್ಭದಲ್ಲಿ ತತ್ತರಿಸಿ ಹೋದಾಗ ದೇಶವಾಸಿಗಳು ಸುಭಿಕ್ಷವಾಗಿರಲು ಉಚಿತ ಪಡಿತರ ವಿತರಿಸಿ ಲಸಿಕೆ ನೀಡಿ ದೇಶದ ಯುಕ್ತಿ-ಶಕ್ತಿಯನ್ನು ಪ್ರಪಂಚಕ್ಕೆ ಸಾಬೀತುಪಡಿಸಿದರು. ಗೋವಿಂದ ಕಾರಜೋಳ ಅನುಭವಿ ರಾಜಕಾರಣಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್‌ ಮಂಡಲ ಅಧ್ಯಕ್ಷರಾದ ಸಿದ್ದೇಶ್, ನುಲೇನೂರು ಈಶಣ್ಣ, ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿಯಾದ ಶೇಖರಪ್ಪ, ಚಿತ್ರಹಳ್ಳಿ ದೇವರಾಜು, ರಾಜಪ್ಪ, ಪರಮೇಶ್, ರಂಗಸ್ವಾಮಿ, ರೂಪ ಸುರೇಶ್, ಅರುಣ್ ಕುಮಾರ್, ನರೇಂದ್ರ ಹಾಗೂ ಪಕ್ಷದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.