ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ೫ ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ರೈತರು ಈ ಸಾಲವನ್ನು ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕು. ಸಕಾಲಕ್ಕೆ ಸಾಲ ಮರು ಪಾವತಿಸುವ ಮೂಲಕ ಇತರರಿಗೆ ಸಾಲ ನೀಡುವುದಕ್ಕೂ ನೆರವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಹಕಾರ ಸಂಘಗಳು ಉತ್ತಮವಾಗಿ ಬೆಳವಣಿಗೆ ಕಂಡಾಗ ರೈತರ ಅಭಿವೃದ್ಧಿ ಸಾಧ್ಯ. ಈ ದೂರದೃಷ್ಟಿಯೊಂದಿಗೆ ಹಿರಿಯ ಸಹಕಾರಿ ಧುರೀಣರು ಸಹಕಾರ ರಂಗಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೊಳಲು ಗ್ರಾಮದಲ್ಲಿ ನಡೆದ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕೆ.ವಿ.ಶಂಕರಗೌಡರು, ಎಚ್.ಡಿ.ಚೌಡಯ್ಯ ಸೇರಿದಂತೆ ಅನೇಕರು ಸಹಕಾರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಾಮಾಣಿಕತೆ, ದಕ್ಷತೆ, ಬದ್ಧತೆ ಇದ್ದಾಗ ಸಹಕಾರ ಸಂಘಗಳು ಬೆಳವಣಿಗೆ ಕಾಣುತ್ತವೆ. ರೈತರ ಬೆಳವಣಿಗೆ ಜೊತೆಯಲ್ಲೇ ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ೫ ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ರೈತರು ಈ ಸಾಲವನ್ನು ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕು. ಸಕಾಲಕ್ಕೆ ಸಾಲ ಮರು ಪಾವತಿಸುವ ಮೂಲಕ ಇತರರಿಗೆ ಸಾಲ ನೀಡುವುದಕ್ಕೂ ನೆರವಾಗಬೇಕು. ರೈತರು ಸಕಾಲದಲ್ಲಿ ಸಾಲದ ಹಣವನ್ನು ಮರುಪಾವತಿಸದಿದ್ದರೆ ಸಹಕಾರ ಸಂಘಗಳು ನಷ್ಟದ ಹಾದಿ ಹಿಡಿಯುತ್ತವೆ ಎಂದರು.

ಮೈಷುಗರ್ ಕಾರ್ಖಾನೆಯನ್ನು ಪುನಾರಂಭಗೊಳ್ಳುವಂತೆ ಮಾಡಿರುವುದಲ್ಲದೆ, ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ೧೦೦ ಕೋಟಿ ರು. ಮೀಸಲಿಟ್ಟಿದ್ದೇನೆ. ಹಂತ ಹಂತವಾಗಿ ವಿಶ್ವವಿದ್ಯಾನಿಲಯ ಬೆಳವಣಿಗೆ ಕಾಣಲಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನದ ದೃಷ್ಟಿಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು ಸಾಲಕ್ಕಾಗಿ ಖಾಸಗಿ ಬ್ಯಾಂಕ್‌ಗಳಿಗೆ ಮೊರೆಹೋಗದೆ ಸಹಕಾರ ಸಂಘಗಳಿಂದಲೇ ಸಾಲ ಪಡೆಯುವಂತಹ ವಾತಾವರಣ ಸೃಷ್ಟಿಸಬೇಕು. ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ರಂಗವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಇಂದಿನ ಸಹಕಾರಿಗಳ ಆದ್ಯ ಕರ್ತವ್ಯವಾಗಬೇಕು ಎಂದರು.

ಸಹಕಾರ ಸಂಘಗಳು ಯಾರ ಮೇಲೂ ಅವಲಂಬಿತರಾಗದೆ ಸ್ವಂತ ಶಕ್ತಿಯ ಮೇಲೆ ಕಾರ್ಯನಿರ್ವಹಣೆ ಮಾಡಬೇಕು. ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಅವರ ಬದುಕನ್ನು ಸುಧಾರಿಸಬೇಕು. ಅದೇ ರೀತಿ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿ ಸಹಕಾರ ಸಂಘಗಳ ಬೆಳವಣಿಗೆಗೂ ರೈತರು ಬೆಂಬಲವಾಗಿ ನಿಲ್ಲುವಂತೆ ತಿಳಿಸಿದರು.

ಹಿರಿಯ ಸಹಕಾರಿ ಧುರೀಣರು ಮಾರ್ಗದರ್ಶನ ಮಾಡಿ ಹೋಗಿದ್ದಾರೆ. ಅವರ ದಾರಿಯಲ್ಲೇ ನಾವೂ ಮುನ್ನಡೆಯಬೇಕು. ಅಧಿಕಾರ ಸೂತ್ರ ಹಿಡಿದವರು ಸಂಘಗಳನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಬೇಕು. ಸಂಘಗಳು ನಷ್ಟಕ್ಕೆ ಗುರಿಯಾಗದಂತೆ ಕಾಪಾಡಿಕೊಂಡು ಸಹಕಾರ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಶ್ರೀಪಟ್ಟಲದಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎನ್. ಚಲುವರಾಯಸ್ವಾಮಿ ಅವರು ೪೦ ಲಕ್ಷ ರು. ನೆರವು ನೀಡಿದ್ದರು. ಅದೇ ರೀತಿ ಹೊಳಲು ಗ್ರಾಮದ ಕೆರೆಯ ಹೂಳೆತ್ತಿಸಿ ನೀರಿನ ಸಂಗ್ರಹಣೆ ಹೆಚ್ಚಿಸುವಂತೆ ಸಚಿವರಲ್ಲಿ ಮನವಿ ಮಾಡಿದಾಗ, ಸಚಿವ ಚಲುವರಾಯಸ್ವಾಮಿ ಅವರು, ನಮ್ಮ ಅಧಿಕಾರವಧಿ ಇನ್ನೊಂದು ವರ್ಷ ಬಾಕಿ ಇದೆ. ಅಷ್ಟರಲ್ಲಿ ಸಾಧ್ಯವಾದರೆ ಕೆರೆ ಹೂಳೆತ್ತಿಸುವ ಕೆಲಸ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಎಚ್.ಬಿ.ರಾಮು, ಮುಖಂಡರಾದ ಎಚ್.ಎಲ್.ಶಿವಣ್ಣ, ನಟ ಪ್ರಮೋದ್, ಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಸಚ್ಚಿದಾನಂದ (ಪಪ್ಪಿ), ಉಪಾಧ್ಯಕ್ಷೆ ಸುಧಾಮಣಿ, ಜಿಲ್ಲಾ ಮುದ್ರಣಾಲಯ ಮಾಜಿ ನಿರ್ದೇಶಕ ಎಚ್.ಎಸ್.ನಂದೀಶ್, ಮುಖಂಡರಾದ ಪಟೇಲ್‌ರಾಮ್, ಜಟ್ಟಿಕುಮಾರ್, ಎಚ್.ಎನ್.ನವೀನ್‌ಗೌಡ, ಚಂದನ್, ಎಚ್.ಎಲ್.ಅಭಿನಂದನ್, ಇತರರು ಹಾಜರಿದ್ದರು.