ಟೆಕ್ ಕ್ಲಸ್ಟರ್ ಆಗಿ ಹೊರಹೊಮ್ಮುತ್ತಿರುವ ತ್ರಿವಳಿನಗರ ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತಿದೆ. ವರ್ಷಕ್ಕೆ 25,000ಕ್ಕೂ ಹೆಚ್ಚು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪದವೀಧರರು ಪ್ರಾದೇಶಿಕ ಕ್ಲಸ್ಟರ್‌ಗಳಿಗೆ ಪ್ರವೇಶಿಸುತ್ತಿದ್ದಾರೆ.
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ- ಬೆಳಗಾವಿಯು ಕರ್ನಾಟಕದ ಮುಂದಿನ ಪ್ರಮುಖ ನಾವೀನ್ಯತೆ, ತಂತ್ರಜ್ಞಾನ, ಉದ್ಯಮಶೀಲತೆ (ಟೆಕ್ ಕ್ಲಸ್ಟರ್) ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವಕುಮಾರ ಗುಪ್ತಾ ಹೇಳಿದರು.ನಗರದಲ್ಲಿ ಬಿಯಾಂಡ್ ಬೆಂಗಳೂರು ಯೋಜನೆಯಡಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ಗುರುವಾರ ಆಯೋಜಿಸಿದ್ದ ಟೆಕ್ಸೆಲರೇಷನ್ 2026ರಲ್ಲಿ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.
ಟೆಕ್ ಕ್ಲಸ್ಟರ್ ಆಗಿ ಹೊರಹೊಮ್ಮುತ್ತಿರುವ ತ್ರಿವಳಿನಗರ ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತಿದೆ. ವರ್ಷಕ್ಕೆ 25,000ಕ್ಕೂ ಹೆಚ್ಚು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪದವೀಧರರು ಪ್ರಾದೇಶಿಕ ಕ್ಲಸ್ಟರ್‌ಗಳಿಗೆ ಪ್ರವೇಶಿಸುತ್ತಿದ್ದಾರೆ. ಬೆಳಗಾವಿಯು ರಾಷ್ಟ್ರೀಯ ಪ್ರತಿಭಾ ಸೂಚ್ಯಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.ಕೆಡಿಇಎಂ ಯೋಜನೆಯಡಿಯ ಕ್ಲಸ್ಟರ್‌ಗಳಲ್ಲಿ 128 ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಜಪಾನಿನ ನಿಡೆಕ್ ಕಂಪನಿ ₹ 600 ಕೋಟಿ ಹೂಡಿಕೆ ಘೋಷಿಸಿದೆ. ಇದರಿಂದ 1,800 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದೇ ರೀತಿ ಅಂದಾಜು ₹ 2000 ಕೋಟಿ ವೆಚ್ಚದಲ್ಲಿ ಏಕಸ್, ಏರ್‌ಬಸ್ ಮತ್ತು ಬೋಯಿಂಗ್ ಕಂಪನಿಗಳು ಹೂಡಿಕೆಗೆ ಮಾತುಕತೆ ನಡೆದಿದೆ ಎಂದು ವಿವರಿಸಿದ ಅವರು, ಪ್ರತಿಭೆ, ಕೌಶಲ್ಯ ಹಾಗೂ ನವೋದ್ಯಮಕ್ಕೆ ಪ್ರೇರೇಪಿಸಲು ಎರಡು ಅತ್ಯುತ್ತಮ ಕೇಂದ್ರ ಸ್ಥಾಪನೆಗೆ ₹ 56 ಕೋಟಿ ನೀಡಿದೆ ಎಂದರು.2031ರ ವೇಳೆಗೆ ಕೆಡಿಇಎಂ ₹ 7,500 ಕೋಟಿ ಡಿಜಿಟಲ್ ಆರ್ಥಿಕತೆ ಮತ್ತು ಈ ಪ್ರದೇಶದಲ್ಲಿ ಕನಿಷ್ಠ 1,000 ಉದ್ಯೋಗ ಕಲ್ಪಿಸಿಕೊಡುವ ಉದ್ದೇಶ ಹೊಂದಿದೆ ಎಂದು ಗುಪ್ತಾ ತಿಳಿಸಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ಕೆಡಿಇಎಂ ಸ್ಥಾಪನೆ ಬಳಿಕ ಬಿಯಾಂಡ್ ಬೆಂಗಳೂರು ಕಲ್ಪನೆಗೆ ಸಾಕಷ್ಟು ಇಂಬು ನೀಡಿದೆ. ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. ಕೆಡಿಇಎಂ ಅಡಿಯಲ್ಲಿ ಈ ವರೆಗೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ 10 ದೊಡ್ಡ ಕಂಪನಿಗಳು ರೂಪುಗೊಂಡಿವೆ. ಸದ್ಯ 100 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದರು.ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ರೂಪುಗೊಂಡ ಕ್ಲಸ್ಟರ್‌ಗಳಿಗೆ ವಿಶೇಷ ಆದ್ಯತೆ ನೀಡಿದ್ದು, ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಅವಿನಾಶ್ ಮೆನನ್, ಸಂತೋಷ ಹುರಳಿಕುಪ್ಪಿ, ಚೈತನ್ಯ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.ಕನಿಷ್ಠ ವೇತನ ಪರಿಷ್ಕರಿಸಲಿ: ಮೆಳ್ಳಿಗೇರಿ
ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಮಿಕರ ಕನಿಷ್ಠ ವೇತನ ಪಾವತಿ ವ್ಯವಸ್ಥೆ ಸರಿಯಾದ ಪದ್ಧತಿಯಲ್ಲ. ಎಲ್ಲ ಕಡೆಗೂ ಒಂದೇ ರೀತಿಯ ಜೀವನ ವೆಚ್ಚ ಇರುವುದಿಲ್ಲ. ಹಾಗಾಗಿ ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿಪಡಿಸುವುದು ಒಳ್ಳೆಯದು ಎಂದು ಉದ್ಯಮಿ ಅರವಿಂದ ಮೆಳ್ಳಿಗೇರಿ ಸಲಹೆ ನೀಡಿದರು. ಬೆಂಗಳೂರು ಜೀವನಮಟ್ಟ, ವೆಚ್ಚಕ್ಕೂ ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಂಥ ನಗರಗಳ ಜೀವನಮಟ್ಟಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಬೆಂಗಳೂರು- ಹುಬ್ಬಳ್ಳಿ- ಕೊಪ್ಪಳ ಕಾರ್ಮಿಕನಿಗೂ ಏಕರೂಪ ಕನಿಷ್ಠ ವೇತನ ಮಾಡುವುದು ಸರಿಯಲ್ಲ. ಜೀವನ ವೆಚ್ಚ ಆಧರಿಸಿ ಪ್ರಾದೇಶಿಕವಾರು ಕನಿಷ್ಠ ವೇತನ ನಿಗದಿ ಮಾಡಬೇಕು. ಇದರಿಂದ ಬೆಂಗಳೂರಿನಲ್ಲಿರುವ ಉದ್ಯಮಿಗಳ ಇತರ ನಗರಗಳಿಗೆ ಶಿಫ್ಟ್ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಪರಿಶೀಲನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.ಹುಬ್ಬಳ್ಳಿ- ಧಾರವಾಡ- ಬೆಳಗಾವಿ ನಗರಗಳಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಇನ್ನಷ್ಟು ಕೌಶಲ್ಯ ರೂಢಿಸಿಕೊಳ್ಳಬೇಕಷ್ಟೇ ಎಂದ ಅವರು, ಆಗ ಬೆಂಗಳೂರಿಗೆ ಹೋಗಬೇಕಾದ ಪ್ರಶ್ನೆಯೇ ಬರುವುದಿಲ್ಲ. ದ್ವಿತೀಯ ದರ್ಜೆ ನಗರಗಳಲ್ಲಿ ಯುವ ಪ್ರತಿಭಾನ್ವಿತರ ಕೊಡುಗೆ ಬೇಕಿದೆ. ಗುಣಮಟ್ಟದ ವಸ್ತುಗಳಿಗೆ ಎಲ್ಲೆಡೆ ಬೇಡಿಕೆ ಇದ್ದೇ ಇರುತ್ತದೆ. ನವೋದ್ಯಮಿಗಳು ಗುಣಮಟ್ಟದ ವಸ್ತುಗಳ ಉತ್ಪಾದನೆ ಮತ್ತು ಗ್ರಾಹಕರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಮುಖ್ಯವಾಗುತ್ತದೆ. ಇದನ್ನು ಉಳಿಸಿಕೊಂಡು ಮುನ್ನಡೆಯಬೇಕೆಂದರು.