ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸೊಸೈಟಿಯ ಸದಸ್ಯರೆಲ್ಲರ ಕಾಳಜಿ ಮತ್ತು ಸಹಕಾರದಿಂದ ಕಳೆದ ಆರ್ಥಿಕ ವರ್ಷದಲ್ಲಿ 1736 ಕೋಟಿ ರುಪಾಯಿ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸದಸ್ಯರ ವಿಶ್ವಾಸ ಮತ್ತು ವ್ಯವಹಾರದ ಜತೆಗೆ ಸಾಲಗಾರರ ಕ್ಲಪ್ತ ಸಮಯದ ಮರುಪಾವತಿಯಿಂದ ಈ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಹಕಾರಿ ರತ್ನ ಎಂ. ಬಾಹುಬಲಿ ಪ್ರಸಾದ್ ಹೇಳಿದರು. ಅವರು ಕನ್ನಡ ಭವನದಲ್ಲಿ ಭಾನುವಾರ ನಡೆದ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 108ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸದಸ್ಯರ ಆರೋಗ್ಯ ವಿಮೆಯನ್ನು ಬಲಪಡಿಸುವ ಚಿಂತನೆಯಿದೆ. ಡಿವಿಡೆಂಡ್ ಪಡೆಯಲಾಗದವರು ಅಗತ್ಯ ದಾಖಲೆಗಳನ್ನು ಒದಗಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸಾಲ ವಸೂಲಾತಿಗೆ ಆದ್ಯತೆ ನೀಡಿ ವಿಶೇಷ ಗಮನ ಹರಿಸಿ ವ್ಯವಹರಿಸಲಾಗುತ್ತಿದ್ದು ಅಗತ್ಯ ಬಿದ್ದರೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಹೇಳಿದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ ಕಾಮತ್ ಸೊಸೈಟಿಯ ವಾರ್ಷಿಕ ವರದಿ ಮಂಡಿಸಿದರು.
ಲೆಕ್ಕ ಪರಿಶೋಧನಾ ವರದಿ, ನಿವ್ವಳ ಲಾಭ ವಿಂಗಡಣೆ, ಹೆಚ್ಚುವರಿ ಖರ್ಚಿನ ಐವೇಜಿಗೆ ಮಂಜೂರಾತಿ ಪಡೆಯಲಾಯಿತು. ಸುದರ್ಶನ್ ಭಟ್, ಸಂತೋಷ್ ನಾಯ್ಕ್ ವಿವರ ನೀಡಿದರು.ಆಡಳಿತ ಮಂಡಳಿಯ ನಿರ್ದೇಶಕ ಮಾಜಿ ಸಚಿವ ಕೆ. ಅಭಯಂಚಂದ್ರ ಜೈನ್ ಮಾತನಾಡಿ ಆರೋಗ್ಯ ಕಾರ್ಡ್, ನೌಕರರಿಗೆ ಪಿಂಚಣಿಯಂತಹ ಮಾದರಿ ಕಾರ್ಯಕ್ರಮಗಳ ಮೂಲಕ ಸೊಸೈಟಿ ಬೆಳೆಯುವಲ್ಲಿ ಎಲ್ಲರ ಪರಿಶ್ರಮವಿದೆ. ಮಾಜಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿಯವರ ಅವಧಿಯಲ್ಲಿ ಸೊಸೈಟಿ ಇನ್ನಷ್ಟು ಗಟ್ಟಿಯಾಗಿದೆ. ಸೊಸೈಟಿಯ ಹಿತರಕ್ಷಣೆ ನಮ್ಮೆಲ್ಲರ ಧ್ಯೇಯವಾಗಲಿ ಎಂದರು.
ನಿರ್ದೇಶಕರಾದ ಮನೋಜ್ ಶೆಟ್ಟಿ, ಅಬ್ದುಲ್ ಗಫೂರ್, ಎಂ.ಪಿ. ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ಎಂ. ಪದ್ಮನಾಭ, ಪ್ರೇಮಾ ಎಸ್. ಸಾಲ್ಯಾನ್, ಅನಿತಾ ಪಿ. ಶೆಟ್ಟಿ, ದಯಾನಂದ ನಾಯ್ಕ ಉಪಸ್ಥಿತರಿದ್ದರು.ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಸದಸ್ಯರ ಲಿಖಿತ, ಮೌಖಿಕ ಪ್ರಶ್ನೆಗಳಿಗೆ ವಿವರ ನೀಡಿದರು. ಉಪಾಧ್ಯಕ್ಷ ಕೆ. ಗಣೇಶ್ ನಾಯಕ್ ವಂದಿಸಿದರು.