ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಕಾಶಿ ಶ್ರೀ

| Published : Jan 13 2024, 01:30 AM IST

ಸಾರಾಂಶ

ಸುರಪುರ ತಾಲೂಕಿನ ಲಕ್ಷ್ಮೀಪುರ-ಬಿಜಾಸ್ಪುರ ಮಾರ್ಗ ಮಧ್ಯದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಲಾಂಛನ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಪ್ರಸ್ತುತ ಪ್ರತಿ ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ. ಅಖಂಡ ವೀರಶೈವ ಲಿಂಗಾಯತ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಒಗ್ಗಟ್ಟಗಾಬೇಕು ಎಂದು ಕಾಶಿಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಲಕ್ಷ್ಮೀಪುರ-ಬಿಜಾಸ್ಪುರ ಮಾರ್ಗ ಮಧ್ಯದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಲಾಂಛನ ಬಿಡುಗಡೆ ಮಾಡಿದ ಅವರು, ಸಮಾಜದ ಏಳ್ಗೆಗಾಗಿ ಚಿಂತಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಯುವಕರು ಮುನ್ನುಗ್ಗುತ್ತಿರುವುದು ಸಂತಸದ ವಿಷಯ ಎಂದರು.

ಇಂದು ಲಾಂಛನ ಲೋಕಾರ್ಪಣೆ ಮೂಲಕ ಎಲ್ಲ ಜಗದ್ಗುರು ಪಂಚಾಚಾರ್ಯರು, ಬಸವಾದಿ ಶರಣರ ಕೃಪೆಯಿಂದ ಸಂಘಟನೆ ರಾಜ್ಯಾದ್ಯಂತ ಉತ್ತಮವಾಗಿ ಕೆಲಸ ಮಾಡಬೇಕು. ಇದಕ್ಕೆ ನಮ್ಮೆಲ್ಲ ಪಂಚಪೀಠಗಳು ಹಾಗೂ ಎಲ್ಲರ ಸಹಕಾರ ಸದಾಕಾಲ ಇರಬೇಕು ಎಂದು ತಿಳಿಸಿದರು.

ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಯುವಕರು ವೀರಶೈವ ಲಿಂಗಾಯತ ಸಮಾಜಕ್ಕಾಗಿ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಶ್ರೀಮಠವು ಸದಾಕಾಲ ನಿಮ್ಮ ಜೊತೆಗಿರಲಿದೆ ಎಂದರು.

ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ಮಾತನಾಡಿದರು. ಮುಖಂಡರಾದ ಮಲ್ಲಣ್ಣ ಸಾಹುಕಾರ, ದೇವಿಂದ್ರಪ್ಪ ಗೌಡ, ಮಲ್ಲು ಬಾದ್ಯಾಪುರ, ಶರಣು ಬಳಿ, ಮೌನೇಶ ಕುಂಬಾರ, ಸೂಗು ಸಜ್ಜನ್ (ಮೋದಿ), ಉದಯ್ ಗುಳಗಿ, ಮಲ್ಲು ಬಡಿಗೇರ, ಖಾದಾರಭಾಷಾ ಸೇರಿ ಇತರರಿದ್ದರು.