ಧಾರ್ಮಿಕ ಆಚರಣೆಗಳಿಂದ ಸಮಾಜದ ಅಭಿವೃದ್ಧಿ

| Published : May 17 2025, 02:39 AM IST

ಸಾರಾಂಶ

ಧಾರ್ಮಿಕ ವಿಚಾರ-ಧಾರೆಗಳನ್ನು ವ್ಯಕ್ತಿಯ ಎದೆಯಲ್ಲಿ ಬಿತ್ತಿದರೆ ಸಮಾಜದಲ್ಲಿ ಸಂತೋಷ , ಶಾಂತಿ ,ನೆಮ್ಮದಿ ಮಾನವೀಯತೆ ರೂಪಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಧರ್ಮ ರಕ್ಷಿಸಿ ಅದು ನಮ್ಮನ್ನು ಕಾಪಾಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಧಾರ್ಮಿಕ ವಿಚಾರ-ಧಾರೆಗಳನ್ನು ವ್ಯಕ್ತಿಯ ಎದೆಯಲ್ಲಿ ಬಿತ್ತಿದರೆ ಸಮಾಜದಲ್ಲಿ ಸಂತೋಷ , ಶಾಂತಿ ,ನೆಮ್ಮದಿ ಮಾನವೀಯತೆ ರೂಪಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಧರ್ಮ ರಕ್ಷಿಸಿ ಅದು ನಮ್ಮನ್ನು ಕಾಪಾಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕರೆ ನೀಡಿದರು.

ತಾಲೂಕಿನ ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿ ಮತ್ತು ಚಿಕ್ಕ ಗೊಲ್ಲರಹಟ್ಟಿಗಳಲ್ಲಿ ಏರ್ಪಟಾಗಿದ್ದ ಶ್ರೀಚಿತ್ರ ಲಿಂಗೇಶ್ವರಸ್ವಾಮಿ , ಶ್ರೀಬೊಮ್ಮಲಿಂಗೇಶ್ವರಸ್ವಾಮಿ ಮತ್ತು ಶ್ರೀಈರಕರಿಯಪ್ಪ ಸ್ವಾಮಿ ದೇವರುಗಳ ನೂತನ ಸ್ಥಿರ ಶಿಲಾ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ದೇವಸ್ಥಾನದ ಉದ್ಘಾಟನಾ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕ ಆಚರಣೆಗಳಿಂದ ದೇಶ ಹಾಗೂ ಸಮಾಜದ ಅಭಿವೃದ್ಧಿಯಾಗಲಿದ್ದು,ಉತ್ತಮ ಮನುಷ್ಯನನ್ನಾಗಿ ರೂಪಿಸುತ್ತದೆ ಎಂದ ಸಚಿವರು, ಇಂದಿನ ದಿನಮಾನಗಳಲ್ಲಿ ಪೋಷಕರು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಸುಭದ್ರ ಸಮಾಜ ಕಟ್ಟಲು ಹೆಣ್ಣುಮಕ್ಕಳು ಪ್ರೇರಣೆಯಾಗಿದ್ದಾರೆ. ಆದ್ದರಿಂದ ಪೋಷಕರು ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಮಾಡದೇ ಸಮಾನಂತರವಾಗಿ ಕಂಡು ಶಿಕ್ಷಣವಂತರನ್ನಾಗಿಸಿ ಎಂದು ಪೋಷಕರಿಗೆ ಸಚಿವ ರಾಜಣ್ಣ ಕರೆ ನೀಡಿದರು. ತಾಲೂಕಿನ ಎಲ್ಲ ಕೆರೆಗಳ ಸಮಗ್ರವಾಗಿ ದುರಸ್ಥಿ ಪಡಿಸುವ ನಿಟ್ಟಿನಲ್ಲಿ ಎತ್ತಿನ ಹೊಳೆ ಯೋಜನೆಯಡಿ 300 ಕೋಟಿ ರು.ಬಿಡುಗಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಹಾಸನ ಜಿಲ್ಲೆಗೆ ನಾನು ಉಸ್ತುವಾರಿ ಸಚಿವರಾಗದಿದ್ದರೆ ಮತ್ತು ಸತ್ಯಭಾಮ ಹಾಸನ ಜಿಲ್ಲಾಧಿಕಾರಿಯಾಗದಿದ್ದರೆ ನಮ್ಮ ಭಾಗಕ್ಕೆ ಎತ್ತಿನ ಹೊಳೆ ನೀರು ಹರಿಯುವುದು ಕನಸಿನ ಮಾತಾಗಿತ್ತು. ಆದರೆ ನಾವುಗಳು ಅಲ್ಲಿನ ಬಲಾಢ್ಯರನ್ನು ಎದುರಿಸಿ ಕಾಮಗಾರಿಗೆ ಚಾಲನೆ ನೀಡಲು ಡಿಸಿ ಸತ್ಯಭಾಮ ಅವರ ಸಹಕಾರ ಮರೆಯುವಂತಿಲ್ಲ. ಹಾಗಾಗಿ ಎಲ್ಲರ ಸಹಕಾರದಿಂದ ಈ ಭಾಗದ ಎಲ್ಲ ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಯಲಿದೆ ಎಂದರು.

ಮಿಡಿಗೇಶಿ ಹೋಬಳಿಯಲ್ಲಿ ಬುರವ ರಸ್ತೆಗಳ ಸಮಗ್ರ ಅಭಿವೃದ್ಧಿಗೆ 80 ಲಕ್ಷ ರು.ಬಿಡುಗಡೆಯಾಗಿದ್ದು, ಈ ಭಾಗದ ಸುತ್ತಮುತ್ತಲಿನ ರೈತರು, ಕೃಷಿಕರು ಎರಡೂ ಬದಿಯಲ್ಲಿ 6 ಅಡಿ ಜಮೀನು ಬಿಟ್ಟು ಕೊಟ್ಟರೆ ಒಳ್ಳೆಯ ಸುಸ್ಸಜ್ಜಿತ ರಸ್ತೆ ನಿರ್ಮಿಸಲು ಸಹಕಾರಿಯಾಗುತ್ತದೆ. ನನ್ನ ಗೆಲುವಿಗೆ ಯಾದವ ಜನಾಂಗ ಮತ್ತು ತಳ ಸಮುದಾಯಗಳ ಆಶೀರ್ವಾದದಿಂದ ನಾನು ಶಾಸಕನಾಗಿ ಸಚಿವನಾಗಲು ಕಾರಣವಾಗಿದೆ ಎಂದು ಸ್ಮರಿಸಿದರು. ಸಿಎಂ ಸಿದ್ದರಾಮಯ್ಯ ಅವರ ಕಾಳಜಿಯಿಂದಾಗಿ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಇಂದು ರಾಜ್ಯದಲ್ಲಿ ಯಾರು ಸಹ ಹಸಿವಿನಿಂದ ಬಳಲುತ್ತಿಲ್ಲ, ಹಸಿವು ಮುಕ್ತ ರಾಜ್ಯವನ್ನಾಗಿಸುವುದೇ ನಮ್ಮ ಕಾಂಗ್ರೆಸ್‌ ಸರ್ಕಾರದ ದ್ಯೇಯೋದ್ದೇಶ, ಅದನ್ನು ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ಸಮಾರಂಭದಲ್ಲಿ ಸಿದ್ದರಬೆಟ್ಟ ಕ್ಷೇತ್ರದ ಶ್ರೀವೀರಭದ್ರಶಿವಾಚಾರ್ಯ ಸ್ವಾಮಿಜಿ, ಹೊನಕಲ್‌ ಮಠದ ಬಸವ ಸಮಾನಂದ ಸ್ವಾಮಿಜಿ, ಜಿಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಎಸಿ ಗೋಟೂರು ಶಿವಪ್ಪ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿವೈಎಸ್‌ಪಿ ಮಂಜುನಾಥ್‌, ಪ್ರೆಸ್ ಎಂ.ಇ.ಕರಿಯಣ್ಣ , ಮುಖಂಡ ಚಿನ್ನಪ್ಪ ಸೇರಿದಂತೆ ಇತರರಿದ್ದರು.