ಭಕ್ತರ ದಾನದ ನೆರವಿನಿಂದ ಶ್ರೀಮಠ ಅಭಿವೃದ್ಧಿ : ನೊಣವಿನಕೆರೆ ಶ್ರೀಗಳು

| Published : Feb 01 2025, 12:01 AM IST

ಸಾರಾಂಶ

ಭಕ್ತರ ದಾನದ ನೆರವಿನಿಂದ ಶ್ರೀಮಠ ಅಭಿವೃದ್ಧಿ ಹೊಂದುತ್ತಿದ್ದು ಶ್ರೀಗಳು ನೂರು ವಷ ಬಾಳಲಿ ಎಂದು ಬೇಡಿಕೊಳ್ಳುವ ಭಕ್ತರೂ ಸಹ ಶತಾಯುಷಿಗಳಾಗಲಿ ಎಂದು ಭಗವಂತನ ಬಳಿ ಪ್ರಾರ್ಥಿಸುವುದಾಗಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಕ್ತರ ದಾನದ ನೆರವಿನಿಂದ ಶ್ರೀಮಠ ಅಭಿವೃದ್ಧಿ ಹೊಂದುತ್ತಿದ್ದು ಶ್ರೀಗಳು ನೂರು ವಷ ಬಾಳಲಿ ಎಂದು ಬೇಡಿಕೊಳ್ಳುವ ಭಕ್ತರೂ ಸಹ ಶತಾಯುಷಿಗಳಾಗಲಿ ಎಂದು ಭಗವಂತನ ಬಳಿ ಪ್ರಾರ್ಥಿಸುವುದಾಗಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶಿಸಿದರು. ತಾಲೂಕಿನ ಶ್ರೀ ಕಾಡಸಿದ್ಧೇಶ್ವರ ಮಠದ ಗುರುಭವನದ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀಗಳ 73ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಈ ಭಾಗದ ರೈತಾಪಿ, ಬಡ ಹಾಗೂ ಮಧ್ಯಮದ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆ ತೆರೆಯಬೇಕೆಂಬ ಮಹಾದಾಸೆಯಿಂದ ಶ್ರೀಕಾಡಸಿದ್ಧೇಶ್ವರ ವಿದ್ಯಾಸಂಸ್ಥೆಗಳನ್ನು ತೆರೆದು ಉತ್ತಮ ಶಿಕ್ಷಣ ನೀಡುತ್ತಿದ್ದೇವೆ. ಆಯುರ್ವೇದದ ಆಸ್ಪತ್ರೆ ತೆರೆದು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಸಾಮಾನ್ಯ ಭಕ್ತನು ಶ್ರೀಮಂತನಾಗಲಿ ಎಂದು ಶ್ರೀಮಠ ಆಶಿಸುತ್ತದೆ. ದೇಶದ ಅನ್ನದಾತ, ಹಗಲಿರುಳು ದೇಶ ಸೇವೆ ಮಾಡುತ್ತಿರುವ ಸೈನಿಕರು ಸಂತೋಷದ ಜೀವನ ನಡೆಸಲಿ, ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ರಾಜಕಾರಣಿಗಳು ಉತ್ತಮ ಸೇವೆ ಮಾಡಲಿ ಎಂದು ಆಶಿಸಿದರು.ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿ ನಮ್ಮ ಹಿರಿಯ ಶ್ರೀಗಳು ಶತಾಯುಷಿಗಳಾಗಲಿ ಎಂದು ಎಲ್ಲಾ ಸದ್ಭಕ್ತರು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಧಾರವಾಡ ತಾಲೂಕು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ನೊಣವಿನಕೆರೆ ಶ್ರೀಗಳು ಈ ಭಾಗದಲ್ಲಿ ಅಷ್ಟೇ ಅಲ್ಲ ನಾಡಿನ ತುಂಬ ಭಕ್ತರನ್ನು ಹೊಂದಿದ್ದಾರೆ. ಶ್ರೀಗಳ ಪಾದಸ್ಪರ್ಷದಿಂದಲೇ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಿರುವ ಉದಾಹರಣೆಗಳು ಭಕ್ತರ ಮುಂದಿವೆ. ರಂಭಾಪುರಿ ಪೀಠದ ಹಿಂದಿನ ಲಿಂಗೈಕ್ಯ ಜಗದ್ಗುರು ಶ್ರೀ ಗಂಗಾಧರ ಭಗವತ್ಪಾದರ ಕೃಪಾಶೀರ್ವಾದಕ್ಕೆ ಪಾತ್ರವಾಗಿರುವ ನೊಣವಿನಕೆರೆ ಶ್ರೀಗಳ ಜೊತೆಗೆ ಇರುವುದೇ ನಮ್ಮೆಲ್ಲರ ಪುಣ್ಯ ಎಂದರು.

ಶ್ರೀಮಠದ ವ್ಯವಸ್ಥಾಪಕ ಶಂಭಯ್ಯದೇವರು ಮಾತನಾಡಿ ಭಗವಂತನ ರೂಪದಲ್ಲಿ ಭೂಮಿಗೆ ಬಂದಿರುವ ಶ್ರೀಗಳು ಭಕ್ತರ ಶ್ರೇಯೋಭಿವೃದ್ಧಿಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಚರಿಸುತ್ತಾರೆ. ಭಕ್ತರ ಸುಖವೇ ನನ್ನ ಸುಖ ಎನ್ನುವ ಶ್ರೀಗಳು ಶ್ರೀಮಠದ ಅಭಿವೃದ್ಧಿಗೆ ಹಗಲಿರಲು ಶ್ರಮಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬೇರುಗಂಡಿ ಬ್ರಹ್ಮನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು, ಅ, ಹೆಗ್ಗಡೆಹಳ್ಳಿ ಶ್ರೀಗಳು, ಮೆಗಳೂರು ಶ್ರೀಗಳು, ಕುಪ್ಪೂರು ಮಠದ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ಲಕ್ಷ್ಮಿನಾರಾಯಣ್, ಬಿಜೆಪಿ ಮುಖಂಡ ಲೋಕೇಶ್ವರ, ಜೆಡಿಎಸ್ ಕೆ.ಟಿ. ಶಾಂತಕುಮಾರ್ ಸೇರಿದಂತೆ ಶ್ರೀಮಠದ ವಿದ್ಯಾ ಸಂಸ್ಥೆಯ ಶಿಕ್ಷಕರು, ದಾಸೋಹ ಮಂಡಳಿ ಪದಾಧಿಕಾರಿಗಳು, ಆಡಳಿತ ವರ್ಗ ಹಾಗೂ ಸಿಬ್ಬಂದಿ ಇದ್ದರು. ನಂತರ ಎಸ್.ಕೆ. ಇಂಟರ್‌ನ್ಯಾಷನ್ ಶಾಲೆ ವಾರ್ಷಿಕೋತ್ಸವ ನಡೆಯಿತು. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.