ಸಾರಾಂಶ
ಗದಗ: ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಅದಕ್ಕಾಗಿ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಗಾಂಧೀಜಿ ಗ್ರಾಮ ಸ್ವರಾಜ್ ಕನಸು ನನಸಾಗಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶುಕ್ರವಾರ ನಡೆದ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಯೋಜನೆಗಳ ತಯಾರಿಕೆ ಪ್ರಕ್ರಿಯೆ ಬಲವರ್ಧನೆಗೊಳಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಈ ಕಾರ್ಯಾಗಾರ ಹೊಸ ಅನುಭವ, ಆಲೋಚನೆ ಮೂಡಿಸಲು ಏರ್ಪಡಿಸಿದ ಕಾರ್ಯಾಗಾರವಾಗಿದೆ, ಎಲ್ಲ ಚುನಾಯಿತ ಪ್ರತಿನಿಧಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ತಮ್ಮನ್ನು ಗ್ರಾಮದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡು ಪ್ರತಿಜ್ಞಾಬದ್ಧರಾಗಿ ಕಾನೂನಿನಲ್ಲಿ ಕಲ್ಪಿಸಿರುವ ಅಧಿಕಾರ ಬಳಸಿ ಒಳ್ಳೆಯ ಕೆಲಸದ ಮೂಲಕ ಜನ ಕಲ್ಯಾಣ ಕಾರ್ಯ ಮಾಡಬೇಕು ಎಂದರು.
ಸಾಮಾನ್ಯ ಜನರಿಗೆ ಗ್ರಾಪಂ ಮೇಲೆ ವಿಶ್ವಾಸ ಬರುವ ಹಾಗೇ ಜನರ ಬೇಕು ಬೇಡಗಳನ್ನು ಸಂಗ್ರಹಿಸಿ ಅದನ್ನು ಅನುಷ್ಠಾನ ತರುವ ಕೆಲಸವಾಗಬೇಕು, ಗ್ರಾಪಂ ಚುನಾಯಿತ ಜನಪ್ರತಿನಿಧಿಗಳಿಗೆ ಕಾನೂನು ಸಾಕಷ್ಟು ಅಧಿಕಾರ ನೀಡಿದೆ, ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಜಾಗೃತ ಮಾಡುವ ವೇದಿಕೆ ಇದಾಗಬೇಕು ಎಂದರು.ಬಿಂಕದಕಟ್ಟಿ, ಕುರ್ತಕೋಟಿ, ಹುಲಕೋಟಿ ಗ್ರಾಪಂಯಲ್ಲಿ ಗೌರವ ಘಟಕ, ಉತ್ತಮವಾದ ಸ್ಮಶಾನ ನಿರ್ಮಾಣ, ದನಗಳ ವಸತಿ ನಿಲಯ ಅಂತಹ ರಚನಾತ್ಮಕ ಕೆಲಸ ಕೈಗೊಂಡಿದ್ದಾರೆ, ಹಾಗಾಗಿ ಇಂತಹ ಕೆಲಸಗಳು ಇನ್ನೂಳಿದ ಪಂಚಾಯತಿಗಳಲ್ಲೂ ಅನುಷ್ಠಾನಕ್ಕೆ ಬರಬೇಕು, ಪ್ರತಿಯೊಂದು ಗ್ರಾಪಂಯಲ್ಲಿ ಸರಿಯಾಗಿ ಹ್ಯಾಬಿಟೆಟ್ ಸಭೆ, ಗ್ರಾಮ ಸಭೆ ನಡೆಯಬೇಕು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಕ್ಕೆ ಬೇಕಾದ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕು ಹಾಗೂ ಬಾಪೂಜಿ ಸೇವಾ ಕೇಂದ್ರವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೇರಳ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ಎಂ. ವಿಜಯಾನಂದ ಮಾತನಾಡಿ, ಕರ್ನಾಟಕವೂ ಅತ್ಯಂತ ಗಟ್ಟಿಯಾದ ಪಂಚಾಯತ ವ್ಯವಸ್ಥೆ ಹೊಂದಿದೆ. ಕರ್ನಾಟಕ ಪಂಚಾಯಿತಯಲ್ಲಿನ ವಿಕೇಂದ್ರೀಕರಣ ವ್ಯವಸ್ಥೆ ಉತ್ತಮವಾಗಿದ್ದು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಶ್ಲಾಘಿಸಿದ್ದಾರೆ. ಪಂಚಾಯತಿಯ ಪ್ರತಿಯೊಬ್ಬ ಜನಪ್ರತಿಯೂ ಸಂವಿಧಾನದ 73 ಮತ್ತು ಪಂಚಾಯತಿಗೆ ಸಂಬಂಧಿಸಿದ ಅರ್ಟಿಕಲ್ ಹಾಗೂ ಸಂವಿಧಾನ ಪೀಠಿಕೆ ಓದಿ ಅರ್ಥೆಸಿಕೊಳ್ಳಬೇಕು. ತಮ್ಮ ಗ್ರಾಮದ ಸಂಪನ್ಮೂಲದ ಶಕ್ತಿ ಮತ್ತು ದೌರ್ಬಲ್ಯ ಗುರುತಿಸಿಕೊಳ್ಳಬೇಕು ಮತ್ತು ರಾಜ್ಯ, ಕೇಂದ್ರ ಸರ್ಕಾರಗಳಿಂದ ಬರುವ ಅನುದಾನ ಗಮನದಲ್ಲಿಟ್ಟುಕೊಂಡು ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದರು.ಉತ್ತಮ ಗ್ರಾಮ ನಿರ್ಮಾಣದಲ್ಲಿ ಎಲ್ಲ ಕೆಲಸಗಳಿಗೂ ದುಡ್ಡಿನ ಅವಶ್ಯಕತೆ ಇರುವುದಿಲ್ಲ, ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ವಹಣೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು ವಯಸಾದವರಿಗೆ ವೃದ್ಧಾಶ್ರಮಕ್ಕೆ ಸೇರಿಸುವುದು ಹೀಗೆ ಖರ್ಚಿಲ್ಲದ, ಕಡಿಮೆ ಖರ್ಚಿನ ಯೋಜನೆ ಕಾರ್ಯರೂಪಕ್ಕೆ ತರಬೇಕು. ನಂತರ ಆದಾಯ ಮತ್ತು ಖರ್ಚನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗಿ ಪ್ರತಿ ಗ್ರಾಮ ಸ್ವಾವಲಂಬಿ ಆಗಬೇಕು ಎಂದರು.
ಈ ವೇಳೆ ಶಾಸಕ ಜಿ.ಎಸ್. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ್ ಮಾತನಾಡಿದರು.ಕಾರ್ಯಾಗಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್.ಎಸ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹಾಗೂ ವಿವಿಧ ಗ್ರಾಪಂ ಜನಪ್ರತಿನಿಧಿಗಳು, ಗ್ರಾಪಂ ಪಿಡಿಓಗಳು ಇದ್ದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ ಸ್ವಾಗತಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ ವಂದಿಸಿದರು.