ಧರ್ಮಸ್ಥಳ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಿದೆ: ಸದಾನಂದ ಬಂಗೇರ

| Published : Oct 20 2024, 01:50 AM IST

ಧರ್ಮಸ್ಥಳ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಿದೆ: ಸದಾನಂದ ಬಂಗೇರ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಗ್ರಾಮಗಳು, ಸಂಘದ ಸದಸ್ಯರ ಮನೆ, ಕುಟುಂಬಗಳು ಅಭಿವೃದ್ಧಿ ಹೊಂದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ತಿಳಿಸಿದರು.

ಕುದುರೆಗುಂಡಿಯಲ್ಲಿ ಕೊಪ್ಪ, ನರಸಿಂಹರಾಜಪುರ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಗ್ರಾಮಗಳು, ಸಂಘದ ಸದಸ್ಯರ ಮನೆ, ಕುಟುಂಬಗಳು ಅಭಿವೃದ್ಧಿ ಹೊಂದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ತಿಳಿಸಿದರು.

ಶನಿವಾರ ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ರಂಗ ಮಂದಿರದಲ್ಲಿ ಧ.ಗ್ರಾ.ಯೋಜನೆ ಕೊಪ್ಪ, ನರಸಿಂಹರಾಜಪುರ ವ್ಯಾಪ್ತಿಯ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಳೆದ 42 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭವಾದ ಧ.ಗ್ರಾ.ಯೋಜನೆ ಈ ಭಾಗದಲ್ಲಿ 17 ವರ್ಷಗಳ ಹಿಂದೆ ಪ್ರಾರಂಭವಾಗಿ ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಾರಿಯಲ್ಲಿದೆ. ಈ ಯೋಜನೆ ಸದಸ್ಯರು ಸಾಮಾಜಿಕ, ಆರ್ಥಿಕವಾಗಿ ಬೆಳೆವಣಿಗೆ ಹೊಂದಿದ್ದಾರೆ. ಧೈರ್ಯದಿಂದ ಎಲ್ಲಾ ವ್ಯವಹಾರಗಳನ್ನು ಪುರುಷರಷ್ಟೇ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಂಘದ ಸದಸ್ಯರು ಶಿಸ್ತಿನಿಂದ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕೊಪ್ಪ ಆರ್‌.ಬಿ.ಎಸ್‌. ಕೆ.ವೈದ್ಯಾಧಿಕಾರಿ ಡಾ. ರೂಪ ಮಾತನಾಡಿ, ಮಹಿಳೆಯರು ಯಾವುದೇ ಸಮಸ್ಯೆ ಎದುರಾದರೂ ಆತ್ಮವಿಶ್ವಾಸದಿಂದ ಮೆಟ್ಟಿ ನಿಲ್ಲಬೇಕು. ಮಹಿಳಾ ಸಬಲೀಕರಣ ಸಾಧಿಸಿರುವ ಮಹಿಳೆಯರು ಹೆಮ್ಮೆ ಪಡಬೇಕು. ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿ ಸಂಪೂರ್ಣ ಆರೋಗ್ಯವಾಗಿದ್ದರೆ ಮಾತ್ರ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ. ಇತ್ತೀಚಿನ ವರ್ಷಗಳಲ್ಲಿ ಕಳಪೆ ಹಾಗೂ ಅಸಮರ್ಪಕ ಆಹಾರ, ಫಾಸ್ಟ್‌ ಫುಡ್ ಸೇವನೆ, ಜೀವನದ ಶೈಲಿ ಬದಲಾಗಿರುವುದರಿಂದ ಮಹಿಳೆಯರಿಗೆ ಅನೇಕ ಕಾಯಿಲೆ ಬರುತ್ತಿದೆ. ರಕ್ತ ಹೀನತೆ, ಮಾನಸಿಕ ಖಿನ್ನತೆ, ಋತುಚಕ್ರದಲ್ಲಿ ಬದಲಾವಣೆ, ಶ್ವಾಸಕೋಶ, ಸ್ತನ ಕ್ಯಾನ್ಸರ್‌ ಕಾಣಿಸುತ್ತಿದೆ. ಕ್ಯಾನ್ಸರ್‌ ಎಂದರೆ ಭಯ ಪಡದೆ ಪ್ರಾರಂಭದಲ್ಲೇ ಕಾಯಲೆ ಗುರುತಿಸಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣವಾಗಲಿದೆ ಎಂದರು.

ಎನ್‌.ಆರ್‌.ಪುರದ ಲೇಖಕಿ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಪುರಾಣ ಕಾಲದಿಂದಲೂ ಮಹಿಳೆ ಯರಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಮಹಿಳೆಯರು ಮಕ್ಕಳಿಗೆ ಬಾಲ್ಯ ದಿಂದಲೇ ಸಂಸ್ಕೃತಿ, ಸಂಪ್ರದಾಯ ಕಲಿಸಬೇಕು. ಚಿಕ್ಕಂದಿನಲ್ಲಿ ಮಕ್ಕಳು ತಪ್ಪು ಮಾಡಿದಾಗ ತಿದ್ದಬೇಕು. ಮಹಿಳೆಯರಿಗೆ ಆರೋಗ್ಯ ಹಾಗೂ ನೆಮ್ಮದಿ ಜೀವನ ಮುಖ್ಯ. ನಮ್ಮ ಹಬ್ಬಗಳ ಬಗ್ಗೆ ಮಹಿಳೆಯರು ತಿಳಿದುಕೊಂಡಿರಬೇಕು. ಕುಟುಂಬಗಳ ನಿರ್ವಹಣೆಯಲ್ಲೂ ಜಾಗೃತರಾಗಬೇಕು. ಹಾಸಿಗೆ ಇದ್ದಷ್ಟು ಕಾಲು ಜಾಚಬೇಕು ಎಂಬ ಗಾದೆಯಿಂದ ನಮ್ಮ ಆದಾಯ ನೋಡಿ ಖರ್ಚು ಮಾಡಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಬಿ.ಸಿ.ಟ್ರಸ್ಟ್‌ ನ ಯೋಜನಾಧಿಕಾರಿ ಎಂ.ಆರ್.ನಿರಂಜನ್‌ ಮಾತನಾಡಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ 25 ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಿವೆ. ಪ್ರತಿ ತಿಂಗಳು ಸಭೆ ನಡೆಸಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಲಾಗುತ್ತದೆ. ಆಟೋಟ ಸ್ಪರ್ಧೆ, ಅಧ್ಯಯನ ಪ್ರವಾಸ, ಸ್ವ ಉದ್ಯೋಗ ತರಬೇತಿ ಶಿಬಿರ, ಆರೋಗ್ಯ ಶಿಬಿರ ಏರ್ಪಡಿಸುತ್ತಿದ್ದೇವೆ. 2 ತಾಲೂಕುಗಳ ವ್ಯಾಪ್ತಿಯಲ್ಲಿ ಧ.ಗ್ರಾ.ಯೋಜನೆಯಡಿ 1980 ಸ್ವಸಹಾಯ ಸಂಘಗಳಿದ್ದು 13,500 ಸದಸ್ಯರಿದ್ದಾರೆ. 63 ಒಕ್ಕೂಟಗಳಿವೆ ಎಂದರು.

ಕೊಪ್ಪ ಪೊಲೀಸ್‌ ಸಬ್ ಇನ್ಸಪೆಕ್ಟರ್‌ ಎಸ್‌.ಶಿವರುದ್ರಮ್ಮ ಮಾತನಾಡಿ, 2012 ರಿಂದ ಪೊಲೀಸ್‌ ಠಾಣೆಯಲ್ಲಿ ಹಲವು ಬದಲಾವಣೆ ಯಾಗಿದೆ. ಪ್ರತಿ ಪೊಲೀಸ್‌ ಠಾಣೆಯಲ್ಲೂ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಇರುತ್ತಾರೆ. ಮಹಿಳೆಯರು ತಮ್ಮ ಸಮಸ್ಯೆ ಬಗ್ಗೆ ಧೈರ್ಯದಿಂದ ಪೊಲೀಸರಲ್ಲಿ ಹೇಳಿಕೊಳ್ಳಬಹುದು ಎಂದರು.

ಇದಕ್ಕೂ ಮೊದಲು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಗೆ ರಂಗೋಲಿ ,ಹೂ ಕಟ್ಟುವ ಸ್ಪರ್ಧೆ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕೊಪ್ಪ ತಹಸೀಲ್ದಾರ್‌ ಲಿಖಿತಾ ಮೋಹನ್‌ ಉದ್ಘಾಟಿಸಿದರು. ಕುದುರೆಗುಂಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ದೀಪ್ತಿ ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಿಂತ್ರವಳ್ಳಿ ಗ್ರಾಪಂ ಅಧ್ಯಕ್ಷೆ ವಿದ್ಯಾ, ಧ.ಗ್ರಾ.ಯೋಜನೆ ಕುದುರೆಗುಂಡಿ ಒಕ್ಕೂಟದ ಅಧ್ಯಕ್ಷ ರಾಜೇಶ್‌, ತಲಮಕ್ಕಿ ಒಕ್ಕೂಟದ ಅಧ್ಯಕ್ಷ ಗಣೇಶ್‌, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾ, ಕುದುರೆಗುಂಡಿ ವಲಯ ಮೇಲ್ವಿಚಾರಕ ಸುಧೀರ್ ಉಪಸ್ಥಿತರಿದ್ದರು.