ಸಾರಾಂಶ
ಚಾಮರಾಜನಗರದ ಲ್ಯಾಂಪ್ಸ್ ಸಹಕಾರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಚಾ.ನಗರ ಜಿಲ್ಲೆಯಲ್ಲಿರುವ ಇತರೇ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಕರಿಗೆ ಆಡಳಿತ ನಿರ್ವಹಣೆ ಕುರಿತ ಬಗ್ಗೆ ತರಬೇತಿ ಶಿಬಿರವನ್ನು ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಹಕಾರ ಸಂಘಗಳ ರಚನೆ ಮತ್ತು ಕಾರ್ಯ ವಿಸ್ತರಣೆಯಿಂದ ಹಳ್ಳಿಗಳ ಪ್ರಗತಿಯಾಗುತ್ತಿವೆ ಎಂದು ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ತಿಳಿಸಿದರು. ನಗರದ ಲ್ಯಾಂಪ್ಸ್ ಸಹಕಾರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಚಾ.ನಗರ ಜಿಲ್ಲೆಯಲ್ಲಿರುವ ಇತರೇ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಬಗ್ಗೆ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತರೇ ಸಹಕಾರ ಸಂಘಗಳ ಕಾರ್ಯವ್ಯಾಪ್ತಿಯು ಬಹಳ ವಿಸ್ತಾರವಾಗಿದ್ದು, ಸಂಘದಿಂದ, ಮೀನುಗಾರರು, ನೇಕಾರರು, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಸೇರಿದಂತೆ ಹತ್ತು ಹಲವಾರು ಸಹಕಾರ ಸಂಘಗಳು ಕುಲ ಕಸುಬು ಅಭಿವೃದ್ಧಿ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇತರೇ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಮತ್ತು ನಿರ್ದೆಶಕರು ಸಹಕಾರ ಸಂಘಗಳ ಕಾಯ್ದೆಗಳು ಹಾಗೂ ಕಾರ್ಯ ವಿಧಾನಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಎಂದು ತಿಳಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಸಹಕಾರ ಶಿಕ್ಷಣದ ಬಗ್ಗೆ ತರಬೇತಿ ನೀಡಿ ಸಹಕಾರಿಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಇಂಥ ಕಾರ್ಯಾಗಾರಗಳು ವೃತ್ತಿ ನೈಪುಣ್ಯತೆ ಹೆಚ್ಚಿಸುತ್ತದೆ. ನಮ್ಮ ಸಹೋದರ ದಿ.ಮಹದೇವಪ್ರಸಾದ್ ಅವರು ಸಹಕಾರ ಸಚಿವರಾಗಿ ಉತ್ತಮ ಕಾರ್ಯಕ್ರಮ ನೀಡುವ ಜೊತಗೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆವಣಿಗೆಯಾಗಿದ್ದ ಸಹಕಾರಿ ಕ್ಷೇತ್ರವನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ವಿಸ್ತರಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿಕೊಂಡರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ.ಬಸವಣ್ಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರವು ಅತ್ಯಂತ ಬಲಿಷ್ಠವಾಗಿದ್ದು, ಈ ಮೂಲಕ ಪ್ರತಿಯೊಬ್ಬರು ಆರ್ಥಿಕ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶವಿದೆ. ಸಹಕಾರ ಸಂಘಗಳ ಮುಲಕ ರ್ದುಬಳರ ಅಭಿವೃದ್ದಿ ಮಾಡುವ ಅವಕಾಶಗಳು ಹೆಚ್ಚಿವೆ. ಬಹಳಷ್ಟು ಸವಲತ್ತುಗಳು ದೊರೆಯುತ್ತವೆ ಎಂದರು. ಜಿಲ್ಲಾ ಸಹಕಾರ ಸಂಘಗಳು ಉಪನಿಬಂಧಕಿ ಜ್ಯೋತಿ ಅರಸು ಮಾತನಾಡಿ, ಸಹಕಾರ ಸಂಘಗಳ ಮೂಲಕ ಯಶಸ್ವಿನಿ ವಿಮೆ ಯೋಜನೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಸಂಘಗಳು ತಮ್ಮ ಸದಸ್ಯರು ಮತ್ತು ಅವರ ಕುಟುಂಬವನ್ನು ಯಶಸ್ವಿನಿ ವಿಮೆಗೆ ಸೇರ್ಪಡೆ ಮಾಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ನಾಗರಾಜು, ಅಮಚವಾಡಿ ನಾಗಸುಂದರ, ಮೈಸೂರಿನ ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ, ಮಲ್ಲೇಶ್, ಕೆಂಡಗಣ್ಣ, ಹಾಗೂ ಇತರೇ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಕರು ಇದ್ದರು.