ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರದಿಂದ ಅನುದಾನ ಕಡಿಮೆಯಾಗಿರುವುದರಿಂದ ಪುರಸಭಾ ತೆರಿಗೆಯಲ್ಲಿ ವಾರ್ಡ್‌ಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.ಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ಸುಮಾರು ೫೫ ಲಕ್ಷ ರು. ವೆಚ್ಚ ವಿವಿಧ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮನೆ ಮಾಲೀಕರು ಹಾಗೂ ನಿವೇಶನದಾರರ ಸಹಕಾರದಲ್ಲಿ ಪುರಸಭೆ ವಿವಿಧ ವಾರ್ಡ್‌ಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಪುರಸಭೆ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಅತಿ ಮುಖ್ಯವಾಗಿದೆ ಎಂದರು.
ಹಲವು ವರ್ಷಗಳಿಂದ ನಾಗಸಮುದ್ರ ರಸ್ತೆಯಿಂದ ರಾಘವೇಂದ್ರ ಕನ್ವೆಷನ್ ಹಾಲ್‌ವರೆಗೆ ಚರಂಡಿ ಹಾಗೂ ಡಾಂಬರ್ ರಸ್ತೆ ನಿರ್ಮಾಣಕ್ಕೆ ವಾರ್ಡಿನ ಸಾರ್ವಜನಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇದನ್ನು ನೀಗಿಸಲು ಸದಸ್ಯರು ಮುಂದಾಗಿದ್ದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.ಬಿ. ಎಂ. ರಸ್ತೆಯಿಂದ ನಾಗಸಮುದ್ರ ಗ್ರಾಮದ ವರೆಗೆ ಸಿಆರ್‌ಎಫ್ ನಿಧಿಯಿಂದ ಸುಮಾರು ಎರಡು ಕೋಟಿ ವೆಚ್ಚ ಮಾಡಿ ರಸ್ತೆ ಡಾಂಬರ್ ಹಾಕಲಾಗಿದೆ. ಇದರಿಂದ ಆನೇಕೆರೆ ಸೇರಿದಂತೆ ವಿವಿಧ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲ ಆಗಲಿದೆ. ಆದ್ಯತೆ ಮೇರೆಗೆ ನಗರದ ಎಲ್ಲಾ ಕಡೆಯಲ್ಲಿ ಕಾಮಗಾರಿ ಮಾಡಿಸಲಾಗುವುದು. ಏಳನೇ ವಾರ್ಡಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿತ್ತು. ಆದರೆ ವಾರ್ಡಿನ ಸದಸ್ಯರ ಅಕಾಲಿಕ ಮರಣದಿಂದ ಅಭಿವೃದ್ಧಿ ಕುಂಠಿತವಾಗಿತ್ತು. ನೂತನ ಸದಸ್ಯರಾಗಿ ರಾಮು ಆಯ್ಕೆಯಾದ ಮೇಲೆ ಕಾಮಗಾರಿ ರಸ್ತೆ ಡಾಂಬರ್ ಹಾಕಿದಾಗ ಬೆಳಗ್ಗಿನ ವೇಳೆ ಮಹಿಳೆಯರು ಮನೆ ಮುಂದೆ ಹೆಚ್ಚು ನೀರು ಹಾಕುತ್ತಾರೆ. ಇದರಿಂದ ಡಾಂಬರ್ ಹಾಳಾಗುತ್ತದೆ, ರಸ್ತೆ ಗುಂಡಿ ಬೀಳುತ್ತದೆ, ರಸ್ತೆಯಲ್ಲಿ ನಿಲ್ಲಿಸಿ ಕಾರು ದ್ವಿ ಚಕ್ರವಾಹನ ತೊಳೆಯುತ್ತಾರೆ, ಇದರಿಂದಲೂ ಡಾಂಬರ್ ರಸ್ತೆ ಹಾಳಾಗುತ್ತದೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಜನತೆ ರಸ್ತೆಗೆ ಹೆಚ್ಚು ನೀರು ಹಾಕುವುದನ್ನು ನಿಲ್ಲಿಸಬೇಕು ಎಂದು ಕಿವಿ ಮಾತು ಹೇಳಿದರು.
ವಾರ್ಡಿನಲ್ಲಿ ಬೀದಿದೀಪಗಳ ಸಮಸ್ಯೆ ಇದೆ, ಇದನ್ನು ನೀಗಿಸಲಾಗುತ್ತಿದೆ, ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ವಾರ್ಡಿನಲ್ಲಿ ಕಸ ರಸ್ತೆ ಬದಿ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ವಾರ್ಡಿನ ಸಾರ್ವಜನಿಕರು ಕಸವನ್ನು ಪುರಸಭೆ ಆಟೋ ಟಿಪ್ಪರ್‌ಗಳಿಗೆ ನೀಡಬೇಕು. ಇದರಿಂದ ನಗರಕ್ಕೆ ಹೆಚ್ಚು ಸೌಂದರ್ಯ ಬರಲಿದೆ ಎಂದು ತಿಳಿಸಿದರು.ಪುರಸಭಾ ಅಧ್ಯಕ್ಷ ಕೋಟೆಮೋಹನ್, ಸದಸ್ಯರಾದ ರಾಮಕೃಷ್ಣ, ಗಣೇಶ್, ಪ್ರಕಾಶ್, ಉಮಾಶಂಕರ್, ರವಿ, ಪ್ರೇಮಿ, ಟಿಎಪಿಎಂಎಸ್ ಅಧ್ಯಕ್ಷ ಅನಿಲ್, ಮುಖಂಡರಾದ ವಾಸು, ರಾಜು, ಮಂಜು, ಗಂಗಾಧರ್, ಬೊರೇಗೌಡ, ನಾಗಣ್ಣ, ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.