ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಜಪ್ಪು ವಾರ್ಡ್‌ನಲ್ಲಿ ಸುಮಾರು 5.85 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನೆರವೇರಿತು.ಜಪ್ಪು ವಾರ್ಡ್ ಸದಸ್ಯರು ಹಾಗೂ ಮಾಜಿ ಮೇಯರ್ ಆದ ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅವಧಿಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ, ಮಹಾನಗರಪಾಲಿಕೆಯ ಸಿಬ್ಬಂದಿಗಳ ವಸತಿ ಸಮುಚ್ಚಯ, ಹೊಸದಾಗಿ ನಿರ್ಮಿಸಿದ ಬಸ್ ಟರ್ಮಿನಲ್ ಹಾಗೂ ಸಾರ್ವಜನಿಕ ಉದ್ಯಾನವನದ ಉದ್ಘಾಟನೆಯನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ನೆರವೇರಿಸಿದರು.
ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯಲ್ಲಿ ಮಾದರಿಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದು ಹೀಗೆಯೇ ಮುಂದುವರಿಯಲಿದೆ ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಒಟ್ಟು 5.85 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಸುಮಾರು 1,200 ಚ.ಮೀ ವಿಸ್ತೀರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರ, 240 ಚ.ಮೀ ವಿಸ್ತೀರ್ಣದ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಲಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ ಅಲೋಪತಿ ಹಾಗೂ ಹೋಮಿಯೊಪತಿ, ಫಿಸಿಯೋಥೆರಪಿ, ಡೆಂಟಲ್ ಕ್ಲಿನಿಕ್, ವೈದ್ಯಾಧಿಕಾರಿ ಹಾಗೂ ಪರೀಕ್ಷಣಾ ಕೊಠಡಿ, ಲ್ಯಾಬ್, ತುರ್ತು ಚಿಕಿತ್ಸಾ ಕೊಠಡಿ, ಔಷಧಾಲಯ, ಇಂಜಕ್ಷನ್ ಕೊಠಡಿ, ರೆಕಾರ್ಡ್ ಕೊಠಡಿ ಹಾಗೂ ಸಭಾಂಗಣ. ಹಾಗೆಯೇ ಮೊದಲನೇ ಅಂತಸ್ತಿನಲ್ಲಿ ಹೆರಿಗೆ ಕೊಠಡಿ, ಸ್ಟೆರಿಲೈಸೇಷನ್ ಕೊಠಡಿ, ವಾರ್ಡ್, ಶಸ್ತ್ರ ಚಿಕಿತ್ಸಾಲಯ, ಡಯಾಲಿಸೀಸ್ ಕೊಠಡಿ ಮುಂತಾದವುಗಳು. ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಕ್ಯಾಟಲ್ ರೂಂ, ಅಪರೇಷನ್ ಥಿಯೇಟರ್, ಔಷಧಾಲಯ, ಸಾಕು ಪ್ರಾಣಿಗಳ ಚಿಕಿತ್ಸಾ ಕೊಠಡಿ, ವೈದ್ಯಾಧಿಕಾರಿಗಳ ಕೊಠಡಿಗಳ ನಿರ್ಮಿಸಲಾಗಿದೆ. 110 ಮೀ. ಉದ್ದ, 11 ಮೀ. ಅಗಲದ ಬಸ್ ಬೇ, 4 ಮೀ ಅಗಲದ ಫುಟ್‌ಪಾತ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ ಎಂದರು.
ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಕೆಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಈ ಕಟ್ಟಡದಲ್ಲಿ ಈಗಾಗಲೇ ಫಾದರ್ ಮುಲ್ಲರ್ ಆಸ್ಪತ್ರೆಯವರ ಹೋಮಿಯೋಪತಿ, ಅಲೋಪತಿ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಶ್ರೀನಿವಾಸ್ ಆಸ್ಪತ್ರೆಯವರಿಂದ ಫಿಸಿಯೋ ಥೆರಪಿ ಡೆಂಟಲ್ ಮುಂತಾದ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದರು.
ಉಪಮೇಯರ್ ಭಾನುಮತಿ, ಮಾಜಿ ಮೇಯರ್ ಸುಧೀರ್ ಶೆಟ್ಟಿ, ಪಾಲಿಕೆ ಸದಸ್ಯರು, ವಾರ್ಡ್ ಅಧ್ಯಕ್ಷರು, ಅಧಿಕಾರಿಗಳು ಇದ್ದರು.