ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಜಿಲ್ಲೆಯ ಗಟ್ಟಿ, ಕುಲಾಲ್, ವಿಶ್ವಕರ್ಮ, ಮೊಗವೀರ, ದೇವಾಡಿಗ, ಕ್ರೈಸ್ತ, ಬ್ರಾಹ್ಮಣ, ಬಲ್ಯಾಯ, ಜಿ.ಎಸ್.ಬಿ., ಎಸ್.ಸಿ., ಎಸ್.ಟಿ., ಜೋಗಿ, ರಾಮ ಕ್ಷತ್ರಿಯ, ಗಾಣಿಗ, ಸವಿತಾ, ಮಡಿವಾಳ ಸಮುದಾಯಗಳ ಸಮಾಲೋಚನಾ ಸಭೆ ನಡೆಸಿ ಸಮುದಾಯಗಳ ಬೇಡಿಕೆಗಳನ್ನು ಆಲಿಸಿದರು.ಈ ಸಂದರ್ಭ ಮಾತನಾಡಿದ ಪದ್ಮರಾಜ್, ಈ ಚುನಾವಣಾ ಸ್ಪರ್ಧೆಯು ಪದ್ಮರಾಜ್‌ಗೆ ಸಿಕ್ಕಿರುವ ಅವಕಾಶ ಅಲ್ಲ. ಸಮಸ್ತ ಹಿಂದುಳಿದ ವರ್ಗಕ್ಕೆ ಕೊಟ್ಟಿರುವ ಅವಕಾಶ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ. ಯಾರೂ ಕೂಡ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ. ಅಭಿವೃದ್ಧಿ ಪರ ಕೆಲಸಗಳಿಗೆ ಬೆಂಬಲ ನೀಡಿ ಎಂದು ಹೇಳಿದರು.
ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಇದುವರೆಗೆ ಕಾಂಗ್ರೆಸ್ ಬದ್ಧತೆ ಮೆರೆದಿದೆ. ಭೂಸುಧಾರಣಾ ಕಾಯ್ದೆ ಸೇರಿದಂತೆ ಅನೇಕ ಯೋಜನೆಗಳಿಂದ ಅಸಂಖ್ಯಾತ ಹಿಂದುಳಿದ ಸಮುದಾಯದ ಕುಟುಂಬಗಳು ತಮ್ಮ ಕಾಲಮೇಲೆ ನಿಲ್ಲುವಂತಾಗಿದೆ ಎಂದರು.ವಕೀಲರ ಸಭೆಯಲ್ಲಿ ಮಾತನಾಡಿದ ಪದ್ಮರಾಜ್, ವಕೀಲ ಸಮುದಾಯಕ್ಕೆ ಈಗ ಅವಕಾಶ ದೊರೆತಿದೆ. ವಕೀಲರ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲಾಗುವುದು. ಅದರಲ್ಲೂ ಮಂಗಳೂರಿಗೆ ಹೈಕೋರ್ಟ್ ಪೀಠ ಬೇಕೆಂಬ ಬೇಡಿಕೆ ಇದ್ದು, ಇದರ ಬಗ್ಗೆ ತಾನು ಉತ್ಸಾಹಿತನಾಗಿದ್ದೇನೆ ಎಂದರು.
ಮಾದರಿ ಜಿಲ್ಲೆ ರೂಪಿಸಲು ಬದ್ಧ:ಸಮಾಜದಲ್ಲಿ ಸಾಮರಸ್ಯವನ್ನು ಬಲಗೊಳಿಸಿ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ. ದ.ಕ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಪದ್ಮರಾಜ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕರು, ಮುಖಂಡರು ಇದ್ದರು.-------------ತುಳುನಾಡ ಸ್ವಾತಂತ್ರ್ಯ ವೀರರಿಗೆ ಗೌರವ
ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.ಕುತ್ತಾರು ಆದಿಕ್ಷೇತ್ರ ಕೊರಗಜ್ಜನ ಸನ್ನಿಧಾನ, ಕುತ್ತಾರು ಆದಿಸ್ಥಳ ಶ್ರೀರಕ್ತೇಶ್ವರಿ ಕೊರಗಜ್ಜ ಕ್ಷೇತ್ರ, ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಕೊಲ್ಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರು.