ನಾಪೋಕ್ಲು: ನಾಪೋಕ್ಲು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಗ್ರಾಪಂ ವ್ಯಾಪ್ತಿಯ ಹಲವು ಭಾಗಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ನೂತನವಾಗಿ ಪ್ರಾರಂಭವಾಗಲಿರುವ ಕಾಮಗಾರಿಗಳ ಭೂಮಿ ಪೂಜೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.
ಈ ವ್ಯಾಪ್ತಿಯಲ್ಲಿ ಮೂರು ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ನಾಲ್ಕು ರಸ್ತೆಗಳ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಉಳಿದಂತೆ ನೆರವೇರಬೇಕಾದ 40 ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕೆಲಸ ಪ್ರಾರಂಭಗೊಳಿಸಲಾಗುವುದು. ಬಾಕಿ ಇರುವ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದರು.ಇಲ್ಲಿಯ ತೋಟಗಾರಿಕಾ ಇಲಾಖೆ ಫಾರ್ಮ ಬಳಿಯಿಂದ ಮಕ್ಕಿ ಶಾಸ್ತಾವು ದೇವಾಲಯದ ಸಂಪರ್ಕ ರಸ್ತೆ ಕಾಮಗಾರಿ 10 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಅದರ ಉದ್ಘಾಟನೆ ನೆರವೇರಿಸಿದರು. ಬಳಿಕ ಕೊಳಕೇರಿಯಿಂದ ಬೊಟ್ಟೋಳಂಡ, ಕಲಿಯಂಡ ಐನ್ ಮನೆಗಳಿಗೆ ತೆರಳುವ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ವನಜಾಕ್ಷಿ ರೇಣಕೇಶ್, ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಕೆ.ಎ. ಇಸ್ಮಾಯಿಲ್, ಕುಲ್ಲೇಟಿರ ಅರುಣ್ ಬೇಬ, ಹೇಮಾವತಿ ಅರುಣ್, ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಸಂಪನ್ ಅಯ್ಯಪ್ಪ, ಸಿರಾಜ್, ವಾಸಿಮ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಒಟ್ಟು 40 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 40 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಂಡ ರಸ್ತೆಗಳ ಉದ್ಘಾಟನೆ ಕಾರ್‍ಯಕ್ರಮ ಜರುಗಿತು.