ಗ್ಯಾರಂಟಿಗಳು ಕೇವಲ ಚುನಾವಣೆಗೆ ಸೀಮಿತ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ರಾಜ್ಯದ ಅಭಿವೃದ್ಧಿ ಬಗ್ಗೆ ಕಳೆದ 2 ವರ್ಷದಿಂದ ಚರ್ಚೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸ ಪ್ರಾರಂಭವೇ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಂಚ ಗ್ಯಾರಂಟಿಯನ್ನು ಇಂದು ಬಹಳ ಹೆಮ್ಮೆಯಿಂದ ಪದೇಪದೇ ಕಾಂಗ್ರೆಸ್ಸಿನವರು ಹೇಳಿಕೊಳ್ಳುತ್ತಿದ್ದಾರೆ. ಅದನ್ನು ಕೊಡಬೇಕಾಗಿರುವುದು ಅವರ ಕರ್ತವ್ಯ. ಕಾರಣ ಚುನಾವಣೆ ವೇಳೆ ಅದನ್ನು ಅವರೇ ಘೋಷಿಸಿದ್ದಾರೆ ಎಂದು ಸುದ್ದಿಗಾರರಿಗೆ ಹೇಳಿದರು.

ಗ್ಯಾರಂಟಿಗಳು ಕೇವಲ ಚುನಾವಣೆಗೆ ಸೀಮಿತ. ಗೃಹಲಕ್ಷ್ಮಿ ಚುನಾವಣಾ ಲಕ್ಷ್ಮಿ. ಇದರ ಪರಿಣಾಮ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆಯುತಿಲ್ಲ. ಒಳಜಗಳದಿಂದ ಆಡಳಿತದ ಮೇಲೂ ಮುಖ್ಯಮಂತ್ರಿ ಹಿಡಿತ ಕಳೆದು ಕೊಂಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಲು ಹಲವಾರು ಬಾರಿ ಆಗ್ರಸಹಿಸಿದರೂ ಸಿಎಂ ಉದಾಸೀನ ತೋರುತ್ತಿದ್ದಾರೆ ಎಂದರು.


ಒಟ್ಟಾರೆಯಾಗಿ ನುಡಿದಂತೆ ನಡೆವ ಸರ್ಕಾರ ಎನ್ನುತ್ತಿದ್ದಾರೆ. ಆದರೆ ಇದು ಎಡವಿರುವ ಸರ್ಕಾರ. ಈ ಸರ್ಕಾರದ ಬಗ್ಗೆ ರಾಜ್ಯದ ಜನ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷದಲ್ಲಿಯೇ ಮುಖ್ಯಮಂತ್ರಿಗಳ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸರ್ಕಾರದ್ದು ಗೂಂಡಾಗರ್ದಿ ನಡವಳಿಕೆ: ಮುಖ್ಯಮಂತ್ರಿಗಳು ನೆರೆಯ ಕೇರಳ ಬಗ್ಗೆಯೇ ಹೆಚ್ಚು ಕಾಳಜಿ ವಹಿಸಿ ವೈನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಪರಿಹಾರ ಕೊಡುತ್ತಾರೆ. ನೆರೆಪೀಡಿತ ಪ್ರದೇಶವೆಂದು ಅಲ್ಲಿ ಮನೆಗಳನ್ನು ಕಟ್ಟಲು ಹಣ ಬಿಡುಗಡೆ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಸಂಕಷ್ಟವಿದ್ದರೂ ಪರಿಹಾರ ಕೊಡಲು ಮುಂದೆ ಬರದಿರುವುದು ಸರ್ಕಾರದ ಗೂಂಡಾಗರ್ದಿ ನಡವಳಿಕೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ರೈತರು ನ್ಯಾಯ, ಯುವಕರು ಉದ್ಯೋಗ ಕೇಳಿದರೆ ಸರ್ಕಾರದ ಕುಮ್ಮಕ್ಕಿನಿಂದ ಅಮಾಯಕರ ಮೇಲೆ ಲಾಠಿ ಚಾರ್ಜ್, ಹಲ್ಲೆ, ಪ್ರಕರಣ ದಾಖಲಾಗುತ್ತಿದೆ ಎಂದರು.

ಇದರ ನಡುವೆ ಆನೆ ತುಳಿತ, ಉದ್ಯೋಗ ಬೇಡಿಕೆ ಮುಂತಾದ ಸಂದರ್ಭದಲ್ಲಿ ಸೌಜನ್ಯದಿಂದ ವರ್ತಿಸಬೇಕಿದೆ. ಸರ್ಕಾರದ ಲಾಠಿ ಚಾರ್ಜ್ನಂತಹ ಘಟನೆ ಅಕ್ಷಮ್ಯ ಅಪರಾಧ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಕೆಲವೊಂದು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಜಯೇಂದ್ರ ಹೇಳಿದರು.೦೩ಬಿಹೆಚ್‌ಆರ್ ೩: ವಿಜಯೇಂದ್ರ