ಚಾಲನೆಗಷ್ಟೇ ಸೀಮಿತವಾದ ಅಭಿವೃದ್ಧಿ ಕಾರ್ಯಗಳು

| Published : Dec 03 2024, 12:34 AM IST

ಸಾರಾಂಶ

ಕುದೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 20 ತಿಂಗಳು ಮುಗಿದಾದರೂ ಇನ್ನೂ ಕುದೂರು, ತಿಪ್ಪಸಂದ್ರ ಹಾಗೂ ಸೋಲೂರು ಹೋಬಳಿಗಳಲ್ಲಿ ಚಾಲನೆ ನೀಡಿದ್ದ ಯಾವುದೇ ಅಭಿವೃದ್ಧಿ ಕೆಲಸಗಳು ಕಾರ್ಯಗತಗೊಳ್ಳದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಕುದೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 20 ತಿಂಗಳು ಮುಗಿದಾದರೂ ಇನ್ನೂ ಕುದೂರು, ತಿಪ್ಪಸಂದ್ರ ಹಾಗೂ ಸೋಲೂರು ಹೋಬಳಿಗಳಲ್ಲಿ ಚಾಲನೆ ನೀಡಿದ್ದ ಯಾವುದೇ ಅಭಿವೃದ್ಧಿ ಕೆಲಸಗಳು ಕಾರ್ಯಗತಗೊಳ್ಳದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಇದುವರೆಗೂ ಆಡಳಿತದಲ್ಲಿ ಒಂದು ಪಕ್ಷ ಇದ್ದರೆ, ಮಾಗಡಿ ಕ್ಷೇತ್ರದಲ್ಲಿ ವಿರೋಧ ಪಕ್ಷದವರು ಗೆಲ್ಲುತ್ತಿದ್ದುದೇ ಹೆಚ್ಚು. ಇದರಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿಸಿದ ಮಟ್ಟದಲ್ಲಿ ಆಗುವುದಿಲ್ಲ ಎಂಬ ಮಾತು ಹಾಲಿ ಶಾಸಕ ಬಾಲಕೃಷ್ಣ ಅವರು ಹೇಳುತ್ತಿದ್ದರು. ಆದರೆ ಈ ಬಾರಿ ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಕಾರಣ ಮಾಗಡಿ ತಾಲೂಕಿನ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ಅನುಷ್ಠಾನಕ್ಕೆ ಬಂದಿಲ್ಲ.

ಸರ್ಕಾರ ರಚನೆಯಾಗಿ ಟೇಕಾಫ್ ಆಗಲು ಆರು ತಿಂಗಳು ಬೇಕೆಂದು ಜನರು ಸುಮ್ಮನಾದರು. ನಂತರ ಲೋಕಸಭಾ ಚುನಾವಣೆ ಬಳಿಕ ಚನ್ನಪಟ್ಟಣ ಉಪಚುನಾವಣೆ ಕಾರಣ. ಎಲ್ಲಾ ಮುಗಿದು ಫಲಿತಾಂಶ ಪ್ರಕಟವಾದರೂ ಇನ್ನೂ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಸಿಕ್ಕಿಲ್ಲ. ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದ ಕಾರಣ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ ಎಂದು ಜನರ ಮಾತಿಗೆ ಇದು ಮನ್ನಣೆ ನೀಡಿದಂತಾಗಿದೆ.

ಮುಗಿಯದ ರಸ್ತೆ ಕಾಮಗಾರಿ:

2023 ಫೆಬ್ರವರಿ ತಿಂಗಳಲ್ಲಿ 3 ಕೋಟಿ ವೆಚ್ಚದಲ್ಲಿ ಕುದೂರು ಮುಖ್ಯರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲು ಕಾಮಗಾರಿ ಆರಂಭವಾಯಿತು. ಆದರೆ ಆಮೆ ನಡಿಗೆಯಂತೆ ನಡೆದ ಕಾಮಗಾರಿ 2025ರ ಹೊಸ್ತಿಲಲ್ಲಿದ್ದರೂ ಇನ್ನೂ ಪೂರ್ಣಗೊಂಡಿಲ್ಲ.

ಮೈದಾನದ ಪೂಜೆಗಷ್ಟೇ ಸೀಮಿತ:

ಮಾರ್ಚ್ 5ರಂದು ಮೈದಾನದ ಪೂಜೆಯಾಯಿತಷ್ಟೆ. ಕಾಮಗಾರಿ ಆರಂಭಗೊಳ್ಳಲೇ ಇಲ್ಲ. ಕುದೂರು ಗ್ರಾಮದಲ್ಲಿ ಕಾಮಗಾರಿಗೆ ಅಡ್ಡ ಬರುವ ಮರ ಕೆರೆ ಏರಿಗಳಿದ್ದರೆ ಮಾತ್ರ ಅತ್ಯಂತ ವೇಗವಾಗಿ ಮರ ಕಡಿಯುತ್ತಾರೆ, ಕೆರೆ ಏರಿ ಒಡೆಯುತ್ತಾರೆ. ನಂತರದ ಕಾರ್ಯಗಳು ಮಾತ್ರ ಅದು ಆದಾಗಲೇ ಗ್ಯಾರಂಟಿ ಎನ್ನುವಷ್ಟರ ಮಟ್ಟಿಗೆ ಜನರು ಬೇಸರಗೊಂಡಿದ್ದಾರೆ.

ಕುದೂರು ಶ್ರೀರಾಮಲೀಲಾ ಮೈದಾನವನ್ನು 13 ಕೋಟಿ ವೆಚ್ಚದಲ್ಲಿ ಹೈಟೆಕ್ ಮೈದಾನವನ್ನಾಗಿ ರೂಪಿಸುವ ಕೆಲಸಕ್ಕೆ ಅಂದಿನ ಸಂಸದ ಡಿ.ಕೆ.ಸುರೇಶ್, ಶಾಸಕ ಎಚ್.ಸಿ,ಬಾಲಕೃಷ್ಣ ಮಾ. 5ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು. ಅದಾದ ಸ್ವಲ್ಪೇ ದಿನಗಳಲ್ಲಿ ಕಾಮಗಾರಿಗೆ ಅಡ್ಡಿ ಎಂದು ಅರಳಿ, ಆಲ, ಬೇವು, ಹತ್ತಿ, ಇನ್ನೂ ಹಲವಾರು ಜಾತಿಯ ಮರಗಳನ್ನು ಹರಾಜು ಹಾಕಿ ಕಡಿದರು. ವರ್ಷ ಮುಗಿಯುತ್ತಾ ಬಂದರು ಹೈಟೆಕ್ ಮೈದಾನದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಕುದೂರು ಬೀದಿಗಳೆಲ್ಲಾ ಗುಂಡಿಮಯ:

ಕುದೂರು ಗ್ರಾಮದ ಎಲ್ಲಾ ಬೀದಿ, ರಸ್ತೆಗಳು ಬಹುತೇಕ ಗುಂಡಿಮಯವಾಗಿದೆ. ಲಕ್ಷ್ಮೀದೇವಿ ನಗರದ ರಸ್ತೆಗಳಲ್ಲಂತೂ ಜನ ಓಡಾಡಲು ಮತ್ತು ದ್ವಿಚಕ್ರ ವಾಹನಗಳಿಗೆ ಸವಾಲೆಂಬಂತೆ ಹಾಳಾಗಿವೆ. ಈ ಕುರಿತು ಗ್ರಾಪಂ ಸದಸ್ಯರು ಕೂಡಾ ಮೌನ ವಹಿಸಿ ಶಾಸಕರ ಗಮನ ಸೆಳೆಯುತ್ತಿಲ್ಲ. ಕುದೂರು ಶಿವಗಂಗೆ ರಸ್ತೆಯಂತೂ ಸಂಪೂರ್ಣ ಹಾಳಾಗಿದ್ದು, ಈ ರಸ್ತೆ ಅಭಿವೃದ್ಧಿಗೆ ಚುನಾವಣಾ ಸಂದರ್ಭದಲ್ಲಿ ಶಾಸಕರು ಮಾತು ಕೊಟ್ಟಿದ್ದರು. ಆದರೆ ರಸ್ತೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಹೇಮಾವತಿ ಕನಸಾಗಿಯೇ ಉಳಿಯುತ್ತಾಳಾ?:

ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನದಿ ನೀರನ್ನು ಮಾಗಡಿ ತಾಲೂಕಿನ ಕರೆಗಳಿಗೆ ಹರಿಸುವುದೇ ನನ್ನ ಮೊದಲ ನಿರ್ಧಾರ ಎಂದು ಚುನಾವಣೆ ವೇಳೆ ಶಾಸಕರು ಮಾತನಾಡಿದ್ದರು. ಇದೆಲ್ಲದರ ನಡುವೆ ತುಮಕೂರು ಜಿಲ್ಲೆಯ ಮೂರ್ನಾಲ್ಕು ಶಾಸಕರು, ಮಾಜಿ ಶಾಸಕರು ಯಾವುದೇ ಕಾರಣಕ್ಕೂ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸುವುದಿಲ್ಲ ಎಂದು ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಗೆ ಅಡ್ಡಗಾಲು ಹಾಕಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಆರು ತಿಂಗಳಾಗಿವೆ. ತುಮಕೂರಿನಲ್ಲಿ ಆಯೋಜನೆಗೊಂಡಿರುವ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಹೇಮಾವತಿ ನದಿ ನೀರನ್ನು ರಾಮನಗರ ಜಿಲ್ಲೆಗೆ ಕೊಡುವುದಿಲ್ಲ ಎಂಬ ಮನವಿ ಅಲ್ಲಿನ ಶಾಸಕರು ಮನವಿ ಮಾಡಲಿದ್ದಾರಂತೆ.

ಉಪಮುಖ್ಯಮಂತ್ರಿ ರಾಮನಗರ ಜಿಲ್ಲೆಯವರೇ ಅಗಿರುವ ಕಾರಣ ಸರ್ಕಾರದ ಮೇಲೆ ಒತ್ತಡ ಹಾಕಿ ಈ ವರ್ಷದಲ್ಲೇ ನೀರು ಹರಿಸಬೇಕಿದೆ. ಈಗಾಗಲೇ ಹೇಮಾವತಿ ನದಿ ನೀರು ಮಾಗಡಿಗೆ ಹರಿಯಲು 995 ಕೋಟಿ ರು. ಸರ್ಕಾರ ಮಂಜೂರು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಾಗಡಿ ಮರೆತ ಸಂಸದ ಡಾ.ಮಂಜುನಾಥ್:

ಅಭಿವೃದ್ಧಿ ಮಾಡುತ್ತಾರೆ ಎಂದು ಡಾ.ಮಂಜುನಾಥ್ ಅವರನ್ನು ಜನರು ಸಂಸದರನ್ನಾಗಿ ಮಾಡಿ ಆರು ತಿಂಗಳಾದರು ಕುದೂರು ತಿಪ್ಪಸಂದ್ರ ಹೋಬಳಿ ಕಡೆಗೆ ಭೇಟಿ ನೀಡಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ, ರೆವಿನ್ಯು ಸಮಸ್ಯೆ ಬಗೆಹರಿಸಲಾರದಷ್ಟು ಜಟಿಲಗೊಂಡಿವೆ. ಗ್ರಾಪಂಗಳಿಗೂ ಯಾವುದೇ ಅನುದಾನಗಳಿಲ್ಲದೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಮನಗಂಡು ಶಾಸಕರು ಮತ್ತು ಸಂಸದರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತಿಗೆ ಬದ್ದರಾಗಿ ಕೆಲಸ ನಿರ್ವಹಿಸಬೇಕೆಂದು ಮತದಾರರು ಆಗ್ರಹಿಸಿದ್ದಾರೆ.

ಕರೆಯೊಡೆದ್ದಾಯಿತು ಡಿಪೋ ಯಾವಾಗ? :

ಕುದೂರು ಭೈರವನದುರ್ಗದ ತಪ್ಪಲಿನಲ್ಲಿದ್ದ ತುಂಬಿದ ಕೆರೆಯನ್ನು ಕೆಎಸ್ಆರ್ಟಿಸಿ ಡಿಪೋ ಮತ್ತು ಬಸ್ ನಿಲ್ದಾಣದ ಸಲುವಾಗಿ ಕೆರೆಯ ಏರಿಯನ್ನು ಒಡೆದು ನೀರನ್ನು ಹೊರಗೆ ಬಿಟ್ಟು ಸಮತಟ್ಟು ಮಾಡಿ ಮೂರು ತಿಂಗಳಾದರು ಡಿಪೋ ಕಾಮಗಾರಿಯೂ ಆರಂಭಗೊಂಡಿಲ್ಲ. ಇತ್ತ ಕೆರೆಯೂ ಇಲ್ಲ, ಅತ್ತ ಡಿಪೋ ಮತ್ತು ಬಸ್‌ ನಿಲ್ದಾಣವೂ ಇಲ್ಲದಂತಾದರೆ ಗ್ರಾಮದ ಗತಿಯೇನು ಎಂಬುದು ಜನರ ಪ್ರಶ್ನೆಯಾಗಿದೆ. ಜೊತೆಗೆ ಸಂಸ್ಕೃತ ವಿಶ್ವವಿದ್ಯಾಲಯವೂ ಉದ್ಘಾಟನೆಗೆ ಸರ್ಕಾರದ ಅಪ್ಪಣೆಗೆ ಕಾದು ಕುಳಿತಿದೆ.

ಕೋಟ್ ..........

ಕುದೂರು ಪಟ್ಚಣದ ಅಭಿವೃದ್ಧಿಗೆ ಸರ್ಕಾರದಿಂದ 60 ಕೋಟಿ ಅನುದಾನ ಮಂಜೂರಾಗಿದೆ. ಆದಷ್ಟು ಬೇಗನೆ ರಸ್ತೆ, ಮೈದಾನ, ಡಿಪೋ, ಬಸ್ ನಿಲ್ದಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಬಾಲಕೃಷ್ಣ ಚಾಲನೆ ಕೊಡುತ್ತಾರೆ. ಚನ್ನಪಟ್ಟಣ ಚುನಾವಣೆ ಇದ್ದ ಕಾರಣ ಕಾಮಗಾರಿ ಕೆಲಸಗಳು ತಡವಾಗಿದೆ.

- ಟಿ.ಹನುಮಂತರಾಯಪ್ಪ. ಮಾಜಿ ಅಧ್ಯಕ್ಷ, ಕುದೂರು ಗ್ರಾಪಂ

1ಕೆಆರ್ ಎಂಎನ್ 4,5,6,7.ಜೆಪಿಜಿ

4. ಬೆಟ್ಟದ ತಪ್ಪಲಿನಲ್ಲಿದ್ದ ಕೆರೆಯನ್ನು ಡಿಪೋ ಸಲುವಾಗಿ ಒಡೆದು ಹಾಕಿರುವುದು

5. ಶ್ರೀರಾಮಲೀಲಾ ಮೈದಾನ ಹೈಟೆಕ್ ಸ್ಪರ್ಶಕ್ಕೆ ಕಾದು ಕುಳಿತಿರುವುದು

6. ಹೇಮಾವತಿ ನದಿ ನೀರು ಹರಿಯುವ ಸಲುವಾಗಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸ್ಥಗಿತಗೊಂಡಿರುವುದು.