ಜಾತ್ರಾ ಸಂಭ್ರಮಕ್ಕೆ ಅಭಿವೃದ್ಧಿ ಕಾಮಗಾರಿಗಳ ಮೆರುಗು

| Published : Apr 29 2025, 12:51 AM IST

ಸಾರಾಂಶ

ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಭಂಡಾರದ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ 10 ವರ್ಷದ ನಂತರ ನಡೆಸಲು ಜಾತ್ರಾ ಕಮಿಟಿಯ ಅಧ್ಯಕ್ಷ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಜಾತ್ರಾ ದಿನಾಂಕವನ್ನು ಪದ್ಧತಿಯಂತೆ ಯುಗಾದಿ ಹಬ್ಬದಂದು ಘೋಷಿಸಿದ್ದಾರೆ. ಜಾತ್ರೆಯು ಜೂನ್ 30 ರಿಂದ ಜುಲೈ 8 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಜಾತ್ರಾಮಹೋತ್ಸವದ ಸಿದ್ಧತೆ ಜೋರಾಗಿದೆ.

ಭೀಮಶಿ ಭರಮಣ್ಣವರ

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಭಂಡಾರದ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ 10 ವರ್ಷದ ನಂತರ ನಡೆಸಲು ಜಾತ್ರಾ ಕಮಿಟಿಯ ಅಧ್ಯಕ್ಷ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಜಾತ್ರಾ ದಿನಾಂಕವನ್ನು ಪದ್ಧತಿಯಂತೆ ಯುಗಾದಿ ಹಬ್ಬದಂದು ಘೋಷಿಸಿದ್ದಾರೆ. ಜಾತ್ರೆಯು ಜೂನ್ 30 ರಿಂದ ಜುಲೈ 8 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಜಾತ್ರಾಮಹೋತ್ಸವದ ಸಿದ್ಧತೆ ಜೋರಾಗಿದೆ.

ಕಳೆದ ಬಾರಿ ಗ್ರಾಮ ದೇವತೆಯರ ಜಾತ್ರೆ 2020ರಂದು ನಡೆಯಬೇಕಾಗಿದ್ದು, ಆ ಸಂದರ್ಭದಲ್ಲಿ ದೇಶಾದ್ಯಂತ ಆವರಿಸಿದ್ದ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಜಾತ್ರೆ ಮೊಟಕುಗೊಳಿಸಿರುವುದರಿಂದ ಗ್ರಾಮ ದೇವತೆಯರ ಪೂಜೆ ಹಾಗೂ ಹೋಮ ಹವನಗಳಿಗೆ ಮಾತ್ರ ಸಿಮೀತವಾಗಿತ್ತು. ಹೀಗಾಗಿ 5 ವರ್ಷಕ್ಕೊಮ್ಮೆ ನಡೆಯಬೇಕಾಗಿದ್ದ ಜಾತ್ರಾ ಮಹೋತ್ಸವ 10 ವರ್ಷದ ನಂತರ ಬಂದಿರುವುದು ಜಾತ್ರಾ ಸಂಭ್ರಮ ಇಮ್ಮಡಿಯಾಗುವಂತೆ ಮಾಡಿದೆ.ಕಾಮಗಾರಿ ಚುರುಕು:

ಜಾತ್ರೆಯಲ್ಲಿ ಸುಮಾರು 20 ರಿಂದ 25 ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಸೇರಲಿದ್ದು, ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು ₹100 ಕೋಟಿಗಳಿಗಿಂತಲೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬರುವ ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಸಹೋದರರು ತಾಕಿತು ಮಾಡಿರುವುದು ಕಾಮಗಾರಿಗೆ ಚುರುಕು ಮುಟ್ಟಿದೆ.

ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹58 ಕೋಟಿಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಗೋಕಾಕ ನಾಕಾ ನಂ.1ರ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ, ನಗರದ ಮಹರ್ಷಿ ವಾಲ್ಮೀಕಿ ವೃತ್ತ (ಬ್ಯಾಳಿಕಾಟಾ)ದಿಂದ ಜತ್ತ ಜಾಂಬೋಟಿ ರಸ್ತೆ, ಎಪಿಎಂಸಿ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟ್ ಚರಂಡಿ ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟು ರಸ್ತೆ ಸುಂದರೀಕರಣ, ನಗರದ ಪಂಪ್‌ಹೌಸ್‌ನಿಂದ ಚಿಕ್ಕಹೋಳಿ ಸೇತುವೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ.

ನಗರಸಭೆಯ ವಿವಿಧ ಅನುದಾನದಡಿಯಲ್ಲಿ ಸುಮಾರು ₹63 ಕೋಟಿಗೂ ಅಧಿಕ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಸಿಸಿ ರಸ್ತೆ, ರಸ್ತೆ ಡಾಂಬರೀಕರಣ, ಚರಂಡಿಗಳಿಗೆ ಪ್ರಿಕಾಸ್ಟ್‌ ಸ್ಲ್ಯಾಬ್ ನಿರ್ಮಾಣ, ಬೀದಿ ದೀಪ, ಸಾರ್ವಜನಿಕ ಮೂತ್ರಿಗಳ ನಿರ್ಮಾಣ, ಹ್ಯಾಂಡ್ ಫಾಗಿಂಗ್ ಮಷೀನ್, ನಾಲಾಗಳಿಗೆ ಸಿಡಿ ನಿರ್ಮಾಣ, ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ, ನೀರಿನ ನಲ್ಲಿಗಳ ಜೋಡಣೆ ರಿಪೇರಿ ಕಾಮಗಾರಿ ಹಾಗೂ ಅಗೇದ ರಸ್ತೆಗಳ ಮರು ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬರುವ ಜೂನ್ 15 ರೊಳಗಾಗಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ.

ಕೋವಿಡ್ ಕಾರಣದಿಂದಾಗಿ ಗೋಕಾಕ ಗ್ರಾಮದೇವತೆಯರ ಜಾತ್ರಾ ಮಹೋತ್ಸವ 10 ವರ್ಷಗಳ ಬಳಿಕ ನಡೆಸಲಾಗುತ್ತಿದೆ. ಎಲ್ಲ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಯಾವುದೇ ಅಡೆತಡೆಯಾಗದಂತೆ ಕ್ರಮವಹಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಸಹ ಭರಪೂರವಾಗಿ ಸಾಗಿವೆ.

-ರಮೇಶ ಜಾರಕಿಹೊಳಿ,

ಶಾಸಕರು ಹಾಗೂ ಗ್ರಾಮ ದೇವತೆಯರ ಜಾತ್ರಾ ಕಮಿಟಿ ಅಧ್ಯಕ್ಷರು ಗೋಕಾಕ.

ಗೋಕಾಕ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಹಿನ್ನೆಲೆ ಟ್ರಾಫೀಕ್ ನಿಯಂತ್ರಿಸಲು ಕುಂಬಾರಗಲ್ಲಿಯ ಸ್ಮಶಾನದ ರಸ್ತೆಯ ಮೂಲಕ ಅಡಿಬಟ್ಟಿ-ಮೆಳವಂಕಿ ಕ್ರಾಸ್‌ವರೆಗೆ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

-ವಿನೋದ ಪಾಟೀಲ,

ಸಹಾಯಕ ಅಭಿಯಂತರ ನಗರಸಭೆ ಗೋಕಾಕ.

ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಜೂನ್ ಕೊನೆಯ ದಿನಗಳ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಸಾರ್ವಜನಿಕರ ಸೇವೆಗೆ ನೀಡಲಾಗುವುದು.

-ಸಮೀರ್‌ ಪವಾರ,

ಸಹಾಯಕ ಅಭಿಯಂತರ ಲೋಕೋಪಯೋಗಿ ಇಲಾಖೆ.