ದೇವಿ ಪುರಾಣವು ಮಾನವನ ದೇಹದ ಪುರಾಣವಾಗಿದೆ

| Published : Oct 17 2023, 12:45 AM IST

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪ್ರಾರಂಭವಾದ ೨೩ನೇ ವರ್ಷದ ದೇವಿ ಪುರಾಣ ಪ್ರವಚನಕ್ಕೆ ಶಂಕ್ರಯ್ಯಶಾಸ್ತ್ರೀ ಹಿರೇಮಠ ಚಾಲನೆ ನೀಡಿದರು.

ಗದಗ: ಅರಿಷಡ್ವರ್ಗಗಳನ್ನು ಅಳಿಸುವ ದೇವಿ ಪುರಾಣವು ಮಾನವನ ದೇಹದ ಪುರಾಣವಾಗಿದ್ದು, ಈ ಪುರಾಣವನ್ನು ಶ್ರದ್ಧಾ ಭಕ್ತಿಯಿಂದ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶಂಕ್ರಯ್ಯಶಾಸ್ತ್ರೀ ಹಿರೇಮಠ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪ್ರಾರಂಭವಾದ ೨೩ನೇ ವರ್ಷದ ದೇವಿ ಪುರಾಣವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲುವ ವಿಧಾನವನ್ನು ದೇವಿ ಪುರಾಣದಲ್ಲಿ ಅತ್ಯಂತ ಅರ್ಥ ಗರ್ಭಿತವಾಗಿ ವಿವರಿಸಲಾಗಿದೆ. ಇದೊಂದು ಕೇವಲ ದೇವಿ ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದ ಕಥೆಯಲ್ಲ. ಚಿದಾನಂದ ಅವಧೂತರು ರಚಿಸಿದ ಈ ಪುರಾಣದ ಪ್ರತಿ ಅಧ್ಯಾಯದಲ್ಲಿ ಮನುಷ್ಯನ ಚಾರಿತ್ರ್ಯವನ್ನು ತಿದ್ದುವ ಮತ್ತು ದಿನಚರಿಯನ್ನೇ ಬದಲಾವಣೆ ಮಾಡುವಂತಹ ವಿಷಯವನ್ನೊಳಗೊಂಡಿದ್ದು ಶ್ರದ್ಧಾಭಕ್ತಿಯಿಂದ ಭಾಗವಹಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಒಂಬತ್ತು ದಿನಗಳ ಕಾಲ ನಡೆಯುವ ಈ ಪುರಾಣದಲ್ಲಿ ಗ್ರಾಮಸ್ಥರು ಭಾಗವಹಿಸಿ ಸಹಾಯ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ದುರ್ಗಾದೇವಿ ಸೇವಾ ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ಮಟ್ಟಿ ಮಾತನಾಡಿದರು.

ಕೊಟ್ರಯ್ಯಶಾಸ್ತ್ರೀಗಳು ನರಗುಂದಮಠ ಅವರು ಪುರಾಣ ಪ್ರವಚನ ಆರಂಭಿಸಿದರು. ಮಾನಪ್ಪ ಬಡಿಗೇರ ಪಠಣ ಮಾಡಿದರು. ಮಂಜುನಾಥ ಗರ್ಜಪ್ಪನವರ , ಈರಪ್ಪ ಕರಿಯಲ್ಲಪ್ಪನವರ ಸಂಗೀತ ಸೇವೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಈರಮ್ಮ ಚಬ್ಬರಭಾವಿ, ಫಕ್ಕಿರವ್ವ ಬೇಲೇರಿ, ಚಂದ್ರವ್ವ ರಿತ್ತಿ, ಚನ್ನಯ್ಯ ಪತ್ರಿಮಠ, ನೀಲವ್ವ ವಡ್ಡರ ಇದ್ದರು. ನಜೀರಅಹ್ಮದ ಕಿರೀಟಗೇರಿ ನಿರೂಪಿಸಿ, ವಂದಿಸಿದರು.