ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಷ್ಟ್ರೀಯ ವಯೋಶ್ರೀ ಯೋಜನೆ ಹಾಗೂ ವಿಶೇಷಚೇತನ ವ್ಯಕ್ತಿಗಳಿಗೆ ಸಹಾಯ ಯೋಜನೆಯಡಿ ಜಿಲ್ಲೆಯ ೨೪೦ ಹಿರಿಯ ನಾಗರಿಕರು ಹಾಗೂ ೪೧೭ ಮಂದಿ ವಿಶೇಷಚೇತನರು ಸೇರಿದಂತೆ ಒಟ್ಟು ೬೫೭ ಫಲಾನುಭವಿಗಳಿಗೆ ೬೦ ಲಕ್ಷ ರು. ಮೊತ್ತದ ಸಾಧನ ಸಲಕರಣೆಗಳನ್ನು ನಗರದಲ್ಲಿ ಮಂಗಳವಾರ ಉಚಿತವಾಗಿ ವಿತರಿಸಲಾಯಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರ್‍ಟಿಫೀಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ೫ ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ದೇಹದ ಯಾವುದೇ ಭಾಗದಲ್ಲಿ ಊನವಾದರೂ ಅದು ಅಂಗವಿಲತೆಯಾಗಿದೆ. ಅಂಗವಿಕಲತೆ ಹುಟ್ಟಿನಿಂದ ಅಥವಾ ಹುಟ್ಟಿದ ಬಳಿಕ ಬರಬಹುದು. ಅಂಗವಿಕಲತೆ ಕತ್ತಲೆಯ ಬದುಕಾಗಿದೆ. ಹಾಗಂತ ಯಾವುದೇ ಅಂಗವಿಕಲರು ಧೃತಿಗೆಡಬಾರದು. ಅಗತ್ಯ ಸೌಲಭ್ಯಗಳನ್ನು ನೀಡಿ ಅವರ ಬಾಳಿನಲ್ಲಿ ಬೆಳಕು ಮೂಡಿಸಲು ಸರ್ಕಾರದೊಂದಿಗೆ ವಿವಿಧ ಸಂಘಸಂಸ್ಥೆಗಳು ನೆರವಾಗಿವೆ. ಅವುಗಳಲ್ಲಿ ಅಲಿಂಕೋ ಸಂಸ್ಥೆಯು ಒಂದಾಗಿದೆ ಎಂದರು.ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯರು ಹಾಗೂ ವಿಶೇಷಚೇತನರನ್ನು ಎಲ್ಲರಂತೆ ಗೌರವದಿಂದ ನಡೆಸಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ೧೮೪೧೬ ವಿಶೇಷಚೇತನರನ್ನು ಗುರುತಿಸಲಾಗಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರಿಗಿದೆ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಂಪಿಕ್ಸ್‌ನಲ್ಲಿ ವಿಶೇಷಚೇತನರು ಚಿನ್ನ ಸೇರಿದಂತೆ ಒಟ್ಟು ೬೦ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷಚೇತನರಿಗೆ ಸಮಾನಾವಕಾಶ ನೀಡಿ ಗುರಿಮುಟ್ಟಲು ಪ್ರೇರೆಪಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ವಿಶೇಷಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಬೇಕು. ಸರ್ಕಾರ ವಿಶೇಷಚೇತನರ ಪುನರ್ವಸತಿಗಾಗಿ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ. ವಿಶೇಷಚೇತನರಿಗೆ ಮೀಸಲಾಗಿರುವ ಸೌಲಭ್ಯಗಳನ್ನು ತಲುಪಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು. ಗೌರವದಿಂದ ನೋಡಿಕೊಳ್ಳಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ ಎಂದರು.
ಜಿಪಂ ಸಿಇಒ ಮೋನಾ ರೋತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸಕಲೇಶ್ವರ, ಅಲಿಂಕೋ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ರಿಷಭ್ ಮಲ್ಲೋತ್ರ, ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ನಗರದ ಪೇಟೆ ಪ್ರೈಮರಿ ಶಾಲೆಯ ೩ನೇ ತರಗತಿ ವಿದ್ಯಾರ್ಥಿನಿ ನುಸಹಾ ಫಾತಿಮಾ ಖಾನ್ ಸಂವಿಧಾನ ಪೀಠಿಕೆ ಬೋಧಿಸಿದಳು.