ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಮಾಜ ಮತ್ತು ದೇಶದ ಏಳಿಗೆಗೆ ದುಡಿಯುತ್ತಿರುವ ಮಠಮಾನ್ಯಗಳ ಅಭಿವೃದ್ಧಿಗೆ ಭಕ್ತರ ಸಹಕಾರವೇ ಕಾರಣವಾಗಿದ್ದು, ಶ್ರೀಮಠವು ಭಕ್ತರ ಸಹಕಾರ ಹಾಗೂ ಹಿರಿಯ ಶ್ರೀಗಳವರ ತಪಸ್ಸು, ಕಾಯಕ, ಧರ್ಮಮಾರ್ಗ ಹಾಗೂ ಭಿಕ್ಷಾಟನೆಯೇ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಯತ್ತ ಸಾಗಲು ಕಾರಣವಾಗಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಬುಧವಾರ ನಡೆದ ಶ್ರೀ ಗುರು ಸಪ್ತಾಹ, ರಂಗನಾಥಸ್ವಾಮಿಯವರ ನವೀಕೃತ ದೇವಾಲಯ ಪ್ರಾರಂಭೋತ್ಸವ, ನೂತನ ಶಿಖರಕ್ಕೆ ಕಳಶ ಪ್ರತಿಷ್ಠಾಪನೆ ಹಾಗೂ ನೂತನ ಬೃಹತ್ ಬಯಲು ರಂಗಮಂದಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು,
ಧರ್ಮ ಕಾರ್ಯದಲ್ಲಿ ಭಕ್ತರು ಸಹಾಯ ಮಾಡಿದರೆ ತನ್ಮೂಲಕ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗವಾಗಲಿದೆ. ರಂಗನಾಥಸ್ವಾಮಿ ದೇವಾಲಯ ನವೀಕರಣ, ಬಯಲು ರಂಗ ಮಂದಿರ ನಿರ್ಮಾಣದಿಂದ ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಭಕ್ತರ ಸಹಕಾರ ಇದೇ ರೀತಿ ಶ್ರೀಮಠದ ಮೇಲಿರಲಿ ಎಂದರು.ಮಕ್ಕಳು ತಂದೆತಾಯಿಗಳ ಕಷ್ಟವನ್ನು ಅರಿತು ಗೌರವ, ಪ್ರೀತಿಯಿಂದ ನಡೆದುಕೊಳ್ಳಬೇಕು. ತಮ್ಮ ಕಷ್ಟಗಳನ್ನೆಲ್ಲಾ ಮರೆಮಾಚಿ ನಿಮಗೆ ಎಲ್ಲವನ್ನೂ ಧಾರೆ ಎರೆಯುವ ನಿಮ್ಮ ಹೆತ್ತವರನ್ನು ಇಳಿವಯಸ್ಸಿನಲ್ಲಿ ಬೇಕು ಬೇಡಗಳನ್ನು ಅರಿತು ನಡೆಯಿರಿ. ಯಾವುದೇ ಕಾರಣಕ್ಕೂ ಅವರನ್ನು ಅನಾಥರಾಗಿಸಬೇಡಿ. ನೀವು ಅವರನ್ನು ಅನಾಥರನ್ನಾಗಿಸಿದಲ್ಲಿ, ನಿಮ್ಮ ಮಕ್ಕಳು ನಿಮ್ಮನ್ನು ಅನಾಥರಾರನ್ನಾಗಿ ಮಾಡುತ್ತಾರೆ ಎಂದು ಯುವಪೀಳಿಗೆಗೆ ಎಚ್ಚರಿಕೆಯ ಮಾತುಗಳನ್ನು ಶ್ರೀಗಳು ತಿಳಿಸಿದರು.
ಸಿರಿಗೆರೆ ಶ್ರೀ ಬೃಹನ್ಮಠದ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿಗೆ ಮಹತ್ವದ ಸ್ಥಾನವಿದ್ದು, ಹಣದಿಂದ ಭಕ್ತಿಯನ್ನು ಕೊಂಡುಕೊಳ್ಳಲಾಗುವುದಿಲ್ಲ, ಮತ್ತೊಬ್ಬರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಣ, ಆಸ್ತಿ, ವಸ್ತುಗಳನ್ನು ಕೊಟ್ಟು ಭಕ್ತಿಯನ್ನು ಪಡೆಯುವುದಲ್ಲ. ಅದು ಸಾಲದ ಮರುಪಾವತಿಯಾಗುತ್ತದೆ. ಭಗವಂತ ಕೊಟ್ಟಿದ್ದನ್ನು ದಾನ ಮಾಡುವುದು ದಾನ ಅಲ್ಲ, ಕಷ್ಟಪಟ್ಟು ಬೆವರು ಸುರಿಸಿ ದುಡಿದದ್ದನ್ನು ನೀಡುವುದೇ ನಿಜವಾದ ದಾನ. ಮನುಷ್ಯ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ಪ್ರೀತಿ, ವಿಶ್ವಾಸ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡಬೇಕಿದೆ ಎಂದರು. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ರಂಗಾಪುರ ಶ್ರೀಮಠವು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದು, ಭಿಕ್ಷಾಟನೆಯ ಮೂಲಕ, ಭಕ್ತರ ಸಹಕಾರದಿಂದ ಅಭಿವೃದ್ಧಿಯಾಗುತ್ತಿದೆ. ಹಿಂದಿನ ಶ್ರೀಗಳ ತಪಸ್ಸಿನ ಶಕ್ತಿ ಹೆಚ್ಚಿದ್ದು ಕೆರೆ, ಕಲ್ಯಾಣಿ, ಬಾವಿ ನಿರ್ಮಿಸಿ ಅನುಕೂಲ ಕಲ್ಪಿಸಿಕೊಟ್ಟಿದ್ದರು. ಅವರ ಹಾದಿಯಲ್ಲಿ ನಡೆಯುತ್ತಿರುವ ೭ನೇ ಶ್ರೀಗಳು ಸಹ ಭಿಕ್ಷಾಟನೆಯ ಮೂಲಕ ಮಠದ ಅಭಿವೃದ್ಧಿ ಶ್ರಮಿಸುತ್ತಿದ್ದಾರೆ ಎಂದರು.ಅರಸೀಕೆರೆ ಮಾಡಾಳ ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ. ಶೀನಪ್ಪ, ಶಸಾಪ ಜಿಲ್ಲಾಧ್ಯಕ್ಷ ವಿದ್ವಾನ್ ಸಿದ್ದರಾಮಯ್ಯ, ಎಸ್‌ಪಿಎಸ್ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯು.ಕೆ. ಶಿವಪ್ಪ, ಸಂಸ್ಕೃತ ಶಿಕ್ಷಕ ಗಂಗಣ್ಣ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಶಂಕರಪ್ಪ, ಶರಣ ಸಾಹಿತ್ಯ ಪರಿಷತ್ತು ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಉಚಿತ ಆರೋಗ್ಯ ಶಿಬಿರ: ಶ್ರೀ ಗುರುಸಪ್ತಾಹದ ಅಂಗವಾಗಿ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.