ಸಾರಾಂಶ
ಕನ್ನಡಪ್ರಭ ವಾರ್ತೆವಿಜಯಪುರ: ತಿಮ್ಮರಾಯಸ್ವಾಮಿ ಬೆಟ್ಟಕ್ಕೆ ಶ್ರಾವಣ ಮಾಸದ ಹಿನ್ನಲೆಯಲ್ಲಿ ಸಾವಿರಾರೂ ಭಕ್ತರು ಪಾದಯಾತ್ರೆ ನಡೆಸಿದರು. ಶ್ರೀ ಆಂಜನೇಯಸ್ವಾಮಿ ಪಾದಯಾತ್ರೆ ಭಕ್ತಾದಿಗಳ ಬಳಗದಿಂದ ಆಯೋಜಿಸಲಾಗಿರುವ 13ನೇ ವರ್ಷದ ಪಾದಯಾತ್ರೆ ಇದಾಗಿದೆ. ಪಟ್ಟಣದ ಯಲ್ಲಮ್ಮ ಸೇರಿದಂತೆ ವಿವಿಧ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪಾದಯಾತ್ರೆ ಹೊರಟರು. ಈ ವೇಳೆ ಮಾಜಿ ಪುರಸಭಾ ಸದಸ್ಯ ಜೆ.ಚಂದ್ರು ಮಾತನಾಡಿ, ಈ ಪಾದಯಾತ್ರೆಯನ್ನು ಪಟ್ಟಣದ ಎಲ್ಲಾ ಭಕ್ತವೃಂದದ ಸಹಕಾರದೊಂದಿಗೆ ಇವತ್ತಿಗೆ ೧೩ ನೇ ವರ್ಷದ ಕಾಲಿಟ್ಟಿದ್ದು ಇವತ್ತು ಸಾವಿರಾರೂ ಭಕ್ತರು ಇಲ್ಲಿನ ತಿಮ್ಮರಾಯಸ್ವಾಮಿ ದರ್ಶನ ಪಡೆಯಲು ಬರುತ್ತಿರುವುದು ಸಂತೋಷದ ವಿಷಯ. ನಮ್ಮ ಸನಾತನ ಹಿಂದೂ ಧರ್ಮವನ್ನು ಉಳಿಸಲು ಎಲ್ಲಾ ಧರ್ಮದ ಜನರ ಸಹಕಾರ ಇದ್ದರೆ ನಾವು ಮುಂದೆ ಇನ್ನೂ ಹೆಚ್ಚಿಗೆ ಭಕ್ತವೃಂದ ಸೇರಿಸಬಹುದು ಎಂದರು. ಭಕ್ತ ವಿ.ಎನ್.ಪ್ರಕಾಶ್ ಮಾತನಾಡಿ, ಸನಾತನ ಧರ್ಮವಾದ ಹಿಂದೂ ಧರ್ಮವು ಹಲವಾರು ವಿಭಿನ್ನ ಸಂಪ್ರದಾಯಗಳನ್ನು ತತ್ವ ಚಿಂತನೆಗಳನ್ನು ಹೊಂದಿರುವ ವೈವಿಧ್ಯಮಯ ಧರ್ಮವಾಗಿದೆ. ಅನೇಕ ಆಚಾರ್ಯರು, ಧಾರ್ಮಿಕ ಪಠ್ಯಗಳು ಮತ್ತು ಸಂಸ್ಕೃತಿಯ ಅಂಶಗಳ ಮೂಲಕ ಹಿಂದೂ ಧರ್ಮದ ತತ್ವಗಳನ್ನು ವಿವರಿಸಿರುವರು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ತಮ್ಮ ಪುಣ್ಯ ಎಂದರು. ಪುರಸಭಾ ಸದಸ್ಯ ನಂದಕುಮಾರ್ ಮಾತನಾಡಿ, ಸನಾತನ ಧರ್ಮದಲ್ಲಿ, ಮೋಕ್ಷವನ್ನು ಪಡೆಯಲು ಜನನ ಮತ್ತು ಮರಣ ಚಕ್ರದಿಂದ ಮುಕ್ತಿ ಪಡೆಯುವುದು. ಇಂದು ಶ್ರಾವಣ ಮಾಸದ ಮೂರನೇ ವಾರವಾದ ಹಿನ್ನಲೆ ನಾವು ಪುರಾಣ ಪ್ರಸಿದ್ದ ಇತಿಹಾಸ ಹೊಂದಿರುವ ತಿಮ್ಮರಾಯಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಮಾಡುವುದೇ ಪುಣ್ಯದ ಕೆಲಸವಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು, ತಿಮ್ಮರಾಯಪ್ಪಸ್ವಾಮಿ ಹಾಗೂ ಸುಬ್ಬಣ್ಣಸ್ವಾಮಿ ಶ್ರೀರಾಮ ಭಜನೆ ತಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮುನಿರಾಜು, ವೆಂಕಟೇಶ್, ಕನಕರಾಜು, ಜೆ.ಆರ್.ಮುನಿವೀರಣ್ಣ, ಶ್ಯಾಮಣ್ಣ, ತರಕಾರಿ ಬಾಬು, ಲಕ್ಷ್ಮಣ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.