ಸಾರಾಂಶ
ಶಿರಸಿ:
ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವದ ಪುಣ್ಯ ಕ್ಷಣ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಜಿಲ್ಲೆಯಲ್ಲದೆ ಬೆಂಗಳೂರು, ಮುಂಬೈ, ದೆಹಲಿ, ಮಂಗಳೂರು, ಬೆಳಗಾವಿ, ಕಂಚಿ ಪ್ರಾಂತದಿಂದಲೂ ಭಕ್ತರು ಆಗಮಿಸಿ ಸಂಭ್ರಮದ ಕಳೆ ಹೆಚ್ಚಿಸುತ್ತಿದ್ದಾರೆ. ಮಾತೆಯರು ಇಡೀ ದಿನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದೇ ನೂರಾರು ಕಿಲೋಮೀಟರ್ ದೂರದಿಂದ ಮುಂಜಾನೆಯೇ ಮಠಕ್ಕೆ ಆಗಮಿಸಿದ್ದಾರೆ. ಮಾತೃ ಭೋಜನ ವಿಶೇಷ:ಬುಧವಾರ ಆಗಮಿಸಿದ ಆರೇಳು ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಮಾತೃ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಪುರುಷ ಸ್ವಯಂ ಸೇವಕರು ಮಾತೆಯರಿಗೆ ಅನ್ನ, ಸಾಂಬಾರ ಇತ್ಯಾದಿ ತಂದು ಕೊಡುವ ಮೂಲಕ ಸಹಾಯ ಮಾಡಿದರು. 1500ಕ್ಕೂ ಅಧಿಕ ಮಾತೆಯರು ಪ್ರಸಾದ ಭೋಜನ ಬಡಿಸುವ ಮೂಲಕ ಅನ್ನಪೂರ್ಣೇಶ್ವರಿಯಾಗಿ ಸೇವೆ ಸಲ್ಲಿಸಿದರು.ಭವಾನಿ, ಲಲಿತಾಂಬಾ, ರಾಜೇಶ್ವರಿ, ಗಂಗಾ, ಗೌರಿ, ಸರಸ್ವತೀ ಸೇರಿದಂತೆ ಹತ್ತು ಕೌಂಟರ್‌ನಲ್ಲಿ ತಲಾ ೨೦ಕ್ಕೂ ಹೆಚ್ಚು ಮಾತೆಯರಿಂದ ಅನ್ನಯಜ್ಞ ನಡೆಯಿತು. ಮಾತೃಕಾ ಭೋಜನದಲ್ಲಿ ಗೋವೆಕಾಯಿ ಪಾಯಸ, ಕೇಸರಿ ಪ್ರಸಾದ, ಅನ್ನ, ಸಾಂಬಾರ, ಗೆಣಸಿನ ಹಸಿ, ಕ್ಯಾಬೀಜ ಪಲ್ಯ, ಅಪ್ಪೆಹುಳಿ, ಮೊಸರು ಇರುವುದು ವಿಶೇಷ. ಸಂಪೇಸರ ರಾಮಚಂದ್ರ ಜೋಶಿ ಹಾಗೂ ಆನಂದ ಭಟ್ಟ ಬಾರೆ ತಂಡ ಅತ್ಯಂತ ಶುಚಿ ಹಾಗೂ ರುಚಿಯಾದ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮಹೋತ್ಸವದಲ್ಲಿ ಅನ್ನಪ್ರಸಾದ ಸಮಿತಿ ಸದಸ್ಯರು, ಸ್ವಯಂ ಸೇವಕರು, ಮತ್ತು ಅನೇಕ ಕಾರ್ಮಿಕರು ಭಕ್ತಿ, ಶ್ರದ್ಧೆಯಿಂದ ರಾತ್ರಿ-ಹಗಲೆನ್ನದೇ ಶ್ರಮಿಸುತ್ತಿದ್ದಾರೆ. ಸಂಜೆ ಮಹಿಳೆಯರು ೧೦ ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಕಟ್ಟಿದರು.ಪರಿಸರ ಪ್ರಿಯ ವ್ಯವಸ್ಥೆ:ಮಠದಲ್ಲಿ ದಿನದಿಂದ ದಿನಕ್ಕೆ ಶಿಷ್ಯರ ಆಗಮನದ ಸಂಖ್ಯೆ ಹೆಚ್ಚುತ್ತಿದೆ. ಪರಿಸರ ಪ್ರಿಯ ಮಹೋತ್ಸವವಾಗಿ ನಡೆಸಲಾಗುತ್ತಿದೆ. ಊಟಕ್ಕೆ ಅಡಕೆ ಹಾಳೆ, ಕಾಗದದ ಲೋಟ, ತಿಂಡಿಗೂ ಕಾಗದದ ತಟ್ಟೆ ಬಳಸಲಾಗಿದೆ. ಕಸ ಎತ್ತಲೂ ನಿರಂತರ ವ್ಯವಸ್ಥೆ ಮಾಡಲಾಗಿದೆ.
ಸ್ವರ್ಣವಲ್ಲೀಯಲ್ಲಿಂದು:
ಸ್ವರ್ಣವಲ್ಲೀ ಮಠದಲ್ಲಿ ಬುಧವಾರ ಬೆಳಗ್ಗೆ ಸನ್ಯಾಸಗ್ರಹಣ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಶ್ರಾದ್ಧ, ಮಾತೃಕಾ ಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿಹವನ, ಮಧ್ಯಾಹ್ನೋತ್ತರ ಬ್ರಹ್ಮಾನ್ವಾಧಾನ, ಪ್ರಾಣಾದಿ ಹೋಮ, ಪುರುಷ ಸೂಕ್ತ ಹವನ, ವಿರಾಜ ಹೋಮ, ಲಕ್ಷ್ಮೀನೃಸಿಂಹ ಜಪ ನಡೆಯಲಿದೆ. ಮಧ್ಯಾಹ್ನ ೩ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮಸಭೆ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀಮದ್ ಶ್ರೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಜತೆಗೆ ಕೂಡಲಿ ಶೃಂಗೇರಿ ಶ್ರೀ, ಶಿರಳಗಿ ಸ್ವಾಮೀಜಿ, ಹೊಳೆ ನರಸಿಪುರ ಸ್ವಾಮೀಜಿ ಸಾನ್ನಿಧ್ಯ ನೀಡುವರು. ಇದೇ ವೇಳೆ ಆಲೋಕಯಾಂಬ ಲಲಿತೇ ಗ್ರಂಥ ಬಿಡುಗಡೆ ಆಗಲಿದೆ. ಯೋಗಾಚಾರ್ಯ ಶಂಕರನಾರಾಯಣ ಜೋಯಿಸರಿಂದ ವಿಶೇಷ ಉಪನ್ಯಾಸ ನಡೆಯಲಿದೆ.ಅಷ್ಟಶ್ರಾದ್ಧ, ಲಕ್ಷ್ಮೀ ನೃಸಿಂಹ ಜಪ:ಶಿಷ್ಯ ಸ್ವೀಕಾರ ಮಹೋತ್ಸವದ ಮೂರನೇ ದಿನ ಮಂಗಳವಾರ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ 1000 ಗಣಪತ್ಯಥರ್ವಶೀರ್ಷ ಜಪ, ಹವನದ ಪೂರ್ಣಾಹುತಿ, ಬ್ರಹ್ಮಚಾರಿ ನಾಗರಾಜ ಭಟ್ಟರಿಂದ ಅಷ್ಟಶ್ರಾದ್ಧ ನೆರವೇರಿತು. ಮಧ್ಯಾಹ್ನೋತ್ತರ ವೈದಿಕರಿಂದ ಲಕ್ಷ್ಮೀನೃಸಿಂಹ ಜಪ ನಡೆಯಿತು. ಸಂಜೆ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಮಾತೆಯರಿಂದ ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ಜರುಗಿದವು.ಬುಧವಾರ ಶಿಷ್ಯ ಸ್ವೀಕಾರದ ಪೂರ್ವಾಂಗದ ಕಾರ್ಯಕ್ರಮಗಳು ಇರುವುದರಿಂದ ಹತ್ತರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪಾಹಾರದ ಕೌಂಟರ್ ಮತ್ತು ಬೆಳಗ್ಗೆಯಿಂದ ಸಂಜೆ ತನಕ ಎಳ್ಳಿನ ನೀರಿನ ವ್ಯವಸ್ಥೆ, ಚಹಾ, ಕಷಾಯ, ತಿಂಡಿ ಇಡಲಾಗಿದೆ. ಎರಡು ತಿಂಗಳ ಶ್ರಮ ಐದು ದಿನಗಳಲ್ಲಿ ಸಂಭ್ರಮವಾಗಿ ಕಾಣಬೇಕಿದೆ ಎಂದು ಅನಂತ ಭಟ್ಟ ಹೇಳಿದರು.ಫೆ. ೨೨ರಂದು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಆಗಮಿಸುವ ಯತಿಗಳನ್ನು, ಸ್ವರ್ಣವಲ್ಲೀ ಶ್ರೀಗಳನ್ನು, ಸನ್ಯಾಸ ಸ್ವೀಕಾರದ ನೂತನ ಶ್ರೀಗಳನ್ನೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುತ್ತಿದ್ದು, ಬೆಳಗ್ಗೆ ೮.೩೦ರೊಳಗೆ ಸ್ವರ್ಣವಲ್ಲೀ ಮಠದಲ್ಲಿ ಇರಬೇಕಿದೆ ಎಂದು ಗೀತಾ ಹೆಗಡೆ ಶೀಗೇಮನೆ ತಿಳಿಸಿದರು.
ಫೆ. ೨೨ರ ಬೆಳಗ್ಗೆ ೯ರಿಂದ ೧೦.೧೫ರ ತನಕ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಶಾಲ್ಮಲಾ ನದಿಯ ನಡುವಿನಲ್ಲಿ ಆಗಲಿದ್ದು, ಮಠಕ್ಕೆ ಬರುವ ಮಾರ್ಗವೂ ಅದರ ದಡದಲ್ಲಿಯೆ ಇದೆ. ಹೀಗಾಗಿ ಒಂದು ಕಾಲು ಗಂಟೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧವಿದೆ. ಈ ಅವಧಿ ಹೊರತುಪಡಿಸಿ ಶ್ರೀಮಠಕ್ಕೆ ಪ್ರವೇಶಿಸಬೇಕಾಗಿದೆ ಎಂದು ಮಠದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡವೆಮನೆ ಹೇಳಿದರು.