ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸುಸಜ್ಜಿತ ಗುಣಮಟ್ಟದ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಮಲೆ ಮಾದೇಶ್ವರ ಭಕ್ತರು ಒತ್ತಾಯಿಸಿದ್ದಾರೆ.ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ತುಮಕೂರು, ಬೆಂಗಳೂರು, ಕನಕಪುರ, ರಾಮನಗರ, ನಾಗಮಂಗಲ, ಆದಿಚುಂಚನಗಿರಿ, ನಂಜನಗೂಡು, ಶಿವಮೊಗ್ಗ ಡಿಪೋ ಸೇರಿದಂತೆ ಇನ್ನಿತರ ಡಿಪೋಗಳಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ನೂರಾರು ಬಸ್‌ಗಳು ಸಂಚಾರ ಮಾಡುತ್ತವೆ. ಆದರೆ ಕೆಲವು ಡಿಪೋಗಳ ಬಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲಿಯೇ ಕಾದು ನಂತರ ಬೇರೆ ಬಸ್‌ಗಳಲ್ಲಿ ಸಂಚಾರ ಮಾಡಬೇಕಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕಿದೆ.
ಭಕ್ತಾದಿಗಳಿಗೆ ಡಕೋಟಾ ಬಸ್ ಭಾಗ್ಯ?: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಚರಿಸುವ ವಾಹನಗಳು ತೀರಾ ಹಳೆಯ ಡಕೋಟಾ ಬಸ್ ಗಳಾಗಿದ್ದು ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ವಾಹನಗಳು ಕೆಟ್ಟು ನಿಲ್ಲುತ್ತಿತ್ತು. ಈ ಬಗ್ಗೆ ಪ್ರಯಾಣಿಕರು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಉತ್ತಮ ದರ್ಜೆಯ ಸಾರಿಗೆಗಳನ್ನು ಮಲೆ ಮಾದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.ಸೋಮವಾರ ಮಧ್ಯಾಹ್ನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ವಡಕೆಹಳ್ಳ ಸಮೀಪ ಕೆಟ್ಟು ನಿಂತಿದೆ. ಬಸ್‌ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಸೋಮವಾರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದಲೇ ಹೆಚ್ಚು ಪ್ರಯಾಣಿಕರು ಬಸ್‌ಗಳಲ್ಲಿ ತೆರಳುತ್ತಿದ್ದರಿಂದ ಅರಣ್ಯ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಸ್‌ನ ಪ್ರಯಾಣಿಕರು ರಸ್ತೆಯಲ್ಲಿ ಹೋಗುವ ಬಸ್‌ಗಳನ್ನು ತಡೆದು ನಿಲ್ಲಿಸಿ ನಿಂತುಕೊಂಡೆ ಪ್ರಯಾಣ ಬೆಳೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಪುದುರಾಮಪುರ, ಅಜ್ಜೀಪುರ, ವಡಕೆಹಳ್ಳ, ತಾಳುಬೆಟ್ಟದ ರಸ್ತೆ, ಮಾರ್ಗ ಮಧ್ಯೆ ಹನೂರು ಪಟ್ಟಣದ ಹೂರವಲಯದಲ್ಲಿ ಬಸ್ಸುಗಳು ಕೆಟ್ಟು ನಿಂತಿರುವ ಘಟನೆಗಳು ನಡೆದಿದ್ದಿವೆ. ಇನ್ನು ಮುಂದಾದರೂ ಸಂಬಂಧಪಟ್ಟ ಕೆಎಸ್ಆರ್‌ಟಿಸಿ ನಿಗಮದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಂಚಾರಕ್ಕೆ ಯೋಗ್ಯವಿರುವ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿದ್ದಾರೆ.