ಸಾರಾಂಶ
- ಪರಿಶಿಷ್ಟರ ಕಾಲೋನಿಯಿಂದ ಚೌಕಿ ಮನೆವರೆಗೆ ಗಟ್ಟಿ ಗಡಿಗೆ, ಹಿಟ್ಟಿನಿಂದ ಮಾಡಿದ ಕೋಣ ಮೆರವಣಗೆ - - -
- ಕಸಬಾ, ಮಹಜೇನಹಳ್ಳಿ ಗ್ರಾಮಗಳ ಗಡಿಗಳಲ್ಲಿ ಚರಗ ಚಲ್ಲುವ ಕಾರ್ಯ - ಹರಕೆ ಹೆಸರಿನಲ್ಲಿ ಸಾವಿರಾರು ಕುರಿಗಳು, ಕೋಳಿಗಳು ಬಲಿ- - - ಕನ್ನಡಪ್ರಭ ವಾರ್ತೆ ಹರಿಹರ ನಗರದಲ್ಲಿ ಊರಮ್ಮ ಉತ್ಸವದ ಎರಡನೇ ದಿನವಾದ ಬುಧವಾರ ನಗರದ ವಿವಿಧ ಬೀದಿಗಳಲ್ಲಿ ಗ್ರಾಮದೇವತೆ ಸಂಚರಿಸಿ ನಸುಕಿನ ಜಾವ 5 ಗಂಟೆಗೆ ಚೌಕಿಮನೆ ತಲುಪಿತು.
ಪರಿಶಿಷ್ಟರ ಕಾಲೋನಿಯಿಂದ ಗಟ್ಟಿ ಗಡಿಗೆ ಮತ್ತು ಹಿಟ್ಟಿನಿಂದ ಮಾಡಿದ ಕೋಣ ಚೌಕಿ ಮನೆಗೆ ತರಲಾಯಿತು. ಹಿಟ್ಟಿನ ಕೋಣದ ಬಲಿ, ಬೇವುಡುಗೆ, ದೀಡು ನಮಸ್ಕಾರ ಸಲ್ಲಿಸುವ ಮೂಲಕ ಭಕ್ತರು ಹರಕೆ ತೀರಿಸಿದರು. ಬೇವಿನ ಉಡುಗೆಯನ್ನು ಉಟ್ಟ ನೂರಾರು ಮಹಿಳೆಯರು ಪುರುಷರು ಮತ್ತು ಚಿಕ್ಕಮಕ್ಕಳು ದೇವಸ್ಥಾನ ರಸ್ತೆಯಲ್ಲಿರುವ ಚೌಕಿಮನೆ ಮುಂಭಾಗ ಆಗಮಿಸಿ ಹರಕೆಯನ್ನು ತೀರಿಸಿದರು. ಗಲ್ಲಿ ಗಲ್ಲಿಗಳ ಭಕ್ತರು ಕುರಿಗಳನ್ನು ಚೌಕಿಮನೆಗೆ ತಂದು ಪೂಜಿಸಿ, ಬಲಿ ನೀಡಿದರು. ಎಡೆಪೂಜೆ ಬಳಿಕ ಸ್ನೇಹಿತರು, ಬೀಗರೊಂದಿಗೆ ಬಾಡೂಟ ಸವಿದರು.ನಸುಕಿನಲ್ಲಿ ದೇವಿಯ ಮೆರವಣಿಗೆ:
ಮಹಜೇನಹಳ್ಳಿ ದೇವಸ್ಥಾನದಿಂದ ಮಂಗಳವಾರ ವಿವಿಧ ವಾದ್ಯಗಳೊಂದಿಗೆ ಆರಂಭವಾದ ದೇವಿ ಮೆರವಣಿಗೆ ಕಸಬಾ ಮೂಲ ದೇವಸ್ಥಾನದ ಮೂಲಕ ಚೌಕಿ ಮನೆಗೆ ಬಂದು ಸೇರಿತು. ಮೆರವಣಿಯ ದಾರಿಯುದ್ದಕ್ಕೂ ಮನೆಯ ಮುಂದೆ ಮಹಿಳೆಯರು ನೀರು, ರಂಗೋಲಿ ಹಾಕಿ, ದೇವಿಯನ್ನು ಸ್ವಾಗತಿಸಿ, ಕಣ್ತುಂಬಿಕೊಂಡರು. ಅರವತ್ತಾರು ಹಳ್ಳಿಗಳ ಒಡತಿ ನಗರದ ಗ್ರಾಮದೇವತೆಗೆ ಬುಧವಾರ ಬೆಳಗಿನ ಜಾವ ದೇವಿಗೆ ಕಣಕದ ಕೋಣ ಬಲಿ ನೀಡುವ ಮೂಲಕ ಆಚರಣೆ ಪೂರೈಸಿದರೆ, ಸಾವಿರಾರು ಕುರಿಗಳು, ಕೋಳಿಗಳು ಹರಕೆ ಹೆಸರಿನಲ್ಲಿ ಬಲಿಯಾದವು.ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಜಾತ್ರೆಯಲ್ಲಿ ಬಿಗಿಭದ್ರತೆ ಕಲ್ಪಿಸಿದೆ. ಇದರ ಪರಿಣಾಮ ಚೌಕಿಮನೆಯ ಸಮೀಪ ಕೋಣವನ್ನು ಬಲಿಕೊಡಲು ಸಾಧ್ಯವಾಗಲಿಲ್ಲ. ಆದರೆ, ಚೌಕಿ ಮನೆಯ ಅಣತಿ ದೂರದಲ್ಲಿ ಇರುವ ಶಿಬಾರ ಸರ್ಕಲ್ ಬಳಿಯ ಕಸಬಾ ದೇವಸ್ಥಾನದ ಬಳಿಯ ಸಂದಿಯಲ್ಲಿ ಕೋಣವನ್ನು ಬಲಿ ನೀಡಲಾಗಿದೆ ಎಂಬ ಮಾತುಗಳು ಜಾತ್ರೆಯಲ್ಲಿ ಕೇಳಿಬಂದವು.
ಬುಧವಾರ ಬೆಳಗಿನ ಜಾವ ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮದವರು ಗಡಿ ಭಾಗಗಳಲ್ಲಿ ಚರಗ ಚೆಲ್ಲಿ. ಶ್ರೀ ಹರಿಹರೇಶ್ವರ ದೇವಸ್ಥಾನದ ಹಿಂಭಾಗದ ಅರಳಿ ಮರದ ಹತ್ತಿರ ಬರುವ ಮೂಲಕ ಚರಗ ಚಲ್ಲುವ ಕಾರ್ಯಕ್ರಮ ಯಶಸ್ವಿಯಾಯಿತು. ಬೇವಿನುಡಿಗೆ ಸೇವೆ ನಡೆಸಿದವರಿಗೆ ಚೌಕಿಮನೆಯ ಮುಂಭಾಗ ಸ್ನಾನ ಮಾಡಲು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿದ ಭಕ್ತರು, ದೇವಿ ದರ್ಶನ ಪಡೆದರು.ಈ ಬಾರಿ ಗ್ರಾಮದೇವತೆ ಉತ್ಸವಕ್ಕೆ ಹೆಚ್ಚಿನ ಜನಸಾಗರವೇ ಹರಿದುಬಂದಿತು. ಕಸಬಾ ಮತ್ತು ಮಹಜೇನಹಳ್ಳಿ ದೇವಸ್ಥಾನಗಳ ಆವರಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಪ್ರಮುಖ ರಸ್ತೆಗಳಲ್ಲಿ ಕಣ್ಣಿಗೆ ಕಾಣುವಷ್ಟು ದೂರ ಜನರು ಹಾಗೂ ಫ್ಲೆಕ್ಸ್‌ಗಳು ಕಾಣುತ್ತಿದ್ದವು. ದಾವಣಗೆರೆ, ಹೊನ್ನಳ್ಳಿ, ರಾಣೆಬೆನ್ನೂರು ಸೇರಿದಂತೆ ಅಕ್ಕಪಕ್ಕದ ತಾಲೂಕಿನಿಂದ ಆಗಮಿಸಿದ ಜನರು ಉತ್ಸವಕ್ಕೆ ಸಾಕ್ಷಿಯಾದರು.
ಜಾತ್ರೆ ಹಿನ್ನೆಲೆ ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ಪೊಲೀಸ್ ಇಲಾಖೆ ಅಲ್ಲಲ್ಲಿ ಮಾರ್ಗ ಬದಲಾವಣೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು.- - - -19ಎಚ್‍ಆರ್‍ಆರ್03:
ಹರಿಹರದಲ್ಲಿ ಗ್ರಾಮದೇವತೆ ಜಾತ್ರೆ ಹಿನ್ನೆಲೆ ಪರಿಶಿಷ್ಟರ ಕಾಲೋನಿಯಿಂದ ಗಟ್ಟಿ ಗಡಿಗೆ, ಹಿಟ್ಟಿನಿಂದ ಮಾಡಿದ ಕೋಣವನ್ನು ಚೌಕಿ ಮನೆಗೆ ತರುವ ವೇಳೆ ಅಪಾರ ಭಕ್ತರು ಪಾಲ್ಗೊಂಡರು.