ಕಂದಹಳ್ಳಿ ಮಾದೇಶನ ದೇಗುಲಕ್ಕೆ ಭಕ್ತರ ದಂಡು

| Published : Aug 05 2024, 12:33 AM IST

ಸಾರಾಂಶ

ತಾಲೂಕಿನ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಭೀಮನ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ಜರುಗಿತು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಭೀಮನ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ಜರುಗಿತು.

ಪ್ರತಿ ವರ್ಷ ಭೀಮನ ಅಮಾವಾಸ್ಯೆ ದಿನ ಕಂದಹಳ್ಳಿ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಅದರಂತೆ ಈ ಭಾರಿಯು ೨೫ ನೇ ವರ್ಷದ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದವು. ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದರು.

ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ಹಾಗೂ ಮಹಾಮಂಗಳಾರತಿ ನಡೆಯಿತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆಯನ್ನು ದೇವರಿಗೆ ಅರ್ಪಿಸಿದರು. ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ದಂಡುಗೋಲು ಸೇವೆ ಸೇರಿದಂತೆ ಇತರೆ ಸೇವೆಗಳು ಸಾಂಗವಾಗಿ ನೆರವೇರಿದವು.

ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ:

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. ಅದರಂತೆ ಈ ಭಾರಿಯೂ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರಲ್ಲದೇ ನಂತರ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.

ಹರಿದು ಬಂದ ಭಕ್ತ ಸಾಗರ:

ಬೆಳಿಗ್ಗೆಯಿಂದಲೇ ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳು, ಆಟೋಗಳ ಮೂಲಕ ಬರಲಾರಂಬಿಸಿದರು. ಪಟ್ಟಣದಿಂದ ಕಾಲ್ನಡಿಗೆಯಲ್ಲೂ ಬರುತ್ತಿದ್ದರು. ಇದರಿಂದ ಪಟ್ಟಣದಿಂದ ಕಂದಹಳ್ಳಿ ಗ್ರಾಮದ ತನಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಜನರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡು ಬಂದಿತು.

ವಿವಿಧೆಡೆ ಆಚರಣೆ:

ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ದುಗ್ಗಹಟ್ಟಿ, ಮೆಲ್ಲಹಳ್ಳಿ, ಹೊನ್ನೂರು, ಅಗರ, ಮಾಂಬಳ್ಳಿ, ಗಣಿಗನೂರು, ಯರಗಂಬಳ್ಳಿ, ಗುಂಬಳ್ಳಿ ನೀಲಕಂಠೇಶ್ವರ ದೇವಸ್ಥಾನ, ಗುಂಬಳ್ಳಿ, ಬೂದಿತಿಟ್ಟು, ಆಮೆಕೆರೆ ರಸ್ತೆ ಬಳಿಯ ಮಹದೇಶ್ವರ, ಶಿವ ದೇಗುಲಗಳಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.