ಸಾರಾಂಶ
ಗುಂಡ್ಲುಪೇಟೆ ತಾಲೂಕಿನಿಂದ 20ಕ್ಕೂ ಹೆಚ್ಚು ಎತ್ತಿನ ಗಾಡಿಯಲ್ಲಿ ಮಲೆ ಮಾದೇಶ್ವರನ ಬೆಟ್ಟಕ್ಕೆ ಭಕ್ತಾದಿಗಳು ತೆರಳಿದರು.
ಕನ್ನಡಪ್ರಭ ವಾರ್ತೆ ಹನೂರು
ಗುಂಡ್ಲುಪೇಟೆ ತಾಲೂಕಿನಿಂದ ಇಪ್ಪತ್ತಕ್ಕೂ ಹೆಚ್ಚು ಎತ್ತಿನಗಾಡಿಗಳಲ್ಲಿ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ದೃಶ್ಯ ಹನೂರು ಪಟ್ಟಣದಲ್ಲಿ ಸಾರ್ವಜನಿಕರ ಗಮನ ಸೆಳೆಯಿತು.ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಆರಾಧ್ಯ ದೈವ ಮಲೆ ಮಹದೇಶ್ವರನ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ರೀತಿಯಲ್ಲಿ ಭಕ್ತಾದಿಗಳು ತಮ್ಮದೇ ಆದ ರೀತಿಯಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸಲು ತೆರಳುವುದು ದಿನನಿತ್ಯ ಈ ಭಾಗದಲ್ಲಿ ಕಂಡುಬರುವುದು ಸಾಮಾನ್ಯ. ಆದರೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ, ಕೊತ್ತಲವಾಡಿ, ಹುಂಡಿಪುರ ಮತ್ತು ಶಿವಪುರ ಗ್ರಾಮದ ನಿವಾಸಿಗಳು ಹಲವು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ಸಾಂಪ್ರದಾಯದಂತೆ ತಮ್ಮ ಎತ್ತಿನಗಾಡಿಗಳನ್ನು ವಿಶೇಷವಾಗಿ ಅಲಂಕಾರಗೊಳಿಸಿ ತೆರಳುವ ಮೂಲಕ ದಾರಿಯುದ್ದಕ್ಕೂ ಗಮನ ಸೆಳೆಯುವಂತೆ ಮಾಡಿದರು.ಜೈಕಾರ ಘೋಷಣೆ:
20ಕ್ಕೂ ಹೆಚ್ಚು ಎತ್ತಿನಗಾಡಿಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ತರಳುವ ಭಕ್ತಾದಿಗಳು ಉಘೇ ಮಾದಪ್ಪ ಉಘೇ ಮಾದಪ್ಪ ಎಂದು ಕೂಗುವ ಮೂಲಕ ಭಕ್ತಿ ಗೀತೆ ಹಾಗೂ ಭಾವಗೀತೆಗಳನ್ನು ಹಾಡುತ್ತಾ ಸಾಗುವುದು ಪಟ್ಟಣದಲ್ಲಿ ಕಂಡು ಬಂತು. ಇದೇ ವೇಳೆಯಲ್ಲಿ ಪಟ್ಟಣದ ನಿವಾಸಿಗಳು ಮಹದೇಶ್ವರ ಬೆಟ್ಟಕ್ಕೆ ಎತ್ತಿನಗಾಡಿಯಲ್ಲಿ ತೆರಳಿದ ಭಕ್ತರಿಗೆ ಶುಭ ಹಾರೈಸಿ ಕಳಿಸಿಕೊಟ್ಟರು. ಮಂಗಳವಾರ ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ತುಂತುರು ಮಳೆಯ ನಡುವೆಯೂ ಹೊರಟ ಎತ್ತಿನಗಾಡಿಗಳಲ್ಲಿ ಭಕ್ತಾದಿಗಳು ತೆರಳಿದರು.